ಕಾರವಾರ, ಅ.16 (DaijiworldNews/AA): ಭಾರತೀಯ ನೌಕಾಪಡೆಗೆ ಇಂದು ಸ್ವದೇಶಿ ನಿರ್ಮಿತ ಬಹುಪಯೋಗಿ ಹಡಗು 'ಸಮರ್ಥಕ್' ಸೇರ್ಪಡೆಯಾಗಿದೆ. ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಕಾರವಾರದ ಐಎನ್ಎಸ್ ಕದಂಬ ನೌಕಾನೆಲೆಯಲ್ಲಿ ಇದನ್ನು ಲೋಕಾರ್ಪಣೆಗೊಳಿಸಿದರು.

'ಸಮರ್ಥಕ್' ಲೋಕಾರ್ಪಣೆಗೊಳಿಸಿ ಮಾತನಾಡಿದ ಸಿ.ಪಿ. ರಾಧಾಕೃಷ್ಣನ್ ಅವರು, "ನಾನು ಚಿಕ್ಕವರಾಗಿದ್ದಾಗ ಭಾರತೀಯ ನೌಕಾ ಸೇನೆ 1971 ರಲ್ಲಿ ಕರಾಚಿಯಿಂದ ಬಂದ ಸಬ್ ಮೆರಿನ್ನನ್ನು ಹೊಡೆದುದನ್ನು ಆಕಾಶವಾಣಿಯಲ್ಲಿ ಕೇಳಿದಾಗ ಮೈ ರೋಮಾಂಚನವಾಗಿತ್ತು. ರಾಜ ರಾಜಚೋಳ ಹಾಗೂ ರಾಜೇಂದ್ರ ಚೋಳರು ತಮ್ಮ ನೌಕಾಸೇನೆಯ ಸಹಾಯದೊಂದಿಗೆ ಬಂಗಾಳಕೊಲ್ಲಿಯಿಂದ ಹಿಡಿದು ದಕ್ಷಿಣ ಪೂರ್ವ ಏಷ್ಯಾದ ಅನೇಕ ದೇಶಗಳ ಮೇಲೆ ಹಿಡಿತ ಸಾಧಿಸಿದರು. ಜಗತ್ತಿನಲ್ಲಿ ಒಂದು ಸಾಮಾನ್ಯ ನೌಕಾಬಲವಾಗಿ ಆರಂಭಗೊಂಡ ಭಾರತೀಯ ನೌಕಾಸೇನೆ ಇಂದು ದೊಡ್ಡ ಮಟ್ಟದಲ್ಲಿ ಬೆಳೆದು ಸ್ವಾವಲಂಬಿಯಾಗಿ ಹೊರಹುಮ್ಮಿದೆ. ಭಾರತದ ರಕ್ಷಣಾ ಉತ್ಪಾದನಾ ನೆಲೆಯನ್ನು ಬಲಪಡಿಸುವಲ್ಲಿ ಖಾಸಗಿ ಉದ್ಯಮಗಳು ಮಹತ್ವದ ಪಾತ್ರ ವಹಿಸಬಲ್ಲದು ಎಂಬುದನ್ನ ಎಲ್ಎನ್ಟಿ ಕಂಪನಿ ತೋರಿಸಿಕೊಟ್ಟಿದೆ" ಎಂದರು.
"ಶಕ್ತಿಯ ಸಂಕೇತವಾಗಿರುವ ಐಎನ್ಎಸ್ ಸಮರ್ಥಕ್ ಆತ್ಮವಿಶ್ವಾಸದಿಂದ ಕೂಡಿದ ಸಾಮರ್ಥ್ಯವುಳ್ಳ, ಸ್ವಾವಲಂಬಿ ಭಾರತವನ್ನು ಮುಂದೆ ಕೊಂಡೊಯ್ಯಲಿದೆ. ಐಎನ್ಎಸ್ ಸಮರ್ಥಕ್ ಸುರಕ್ಷಿತ ಸಮುದ್ರಯಾನ ನಡೆಸಲಿ, ದೇಶದ ಉಜ್ವಲ ಭವಿಷ್ಯಕ್ಕೆ ವಿಶೇಷ ಕೊಡಿಗೆ ನೀಡಲಿ ಎಂದು ಶುಭಕೋರುತ್ತೇನೆ. ಈ ಹಡಗನ್ನು ದೈರ್ಯ ಹಾಗೂ ಸಮರ್ಪಣಾ ಭಾವನೆಯಿಂದ ಮುನ್ನಡೆಸಿ ಎಂದು ಎಮದು ತಿಳಿಸಿದರು.
ಕಾರ್ಯಕ್ರಮದಲ್ಲಿ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್, ಫ್ಲಾಗ್ ಆಫಿಸರ್ ಆಫ್ ಕರ್ನಾಟಕ ವಿಕ್ರಂ ಮೆನನ್, ಸಚಿವ ಸಂತೋಷ್ ಲಾಡ್, ನೌಕಾಪಡೆ ಮತ್ತು ರಕ್ಷಣಾ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದರು. ಎಲ್ ಅಂಡ್ ಟಿ ಕಂಪನಿಯ ಪ್ರತಿನಿಧಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಕೇಂದ್ರ ಸರ್ಕಾರದ 'ಮೇಕ್ ಇನ್ ಇಂಡಿಯಾ' ಉಪಕ್ರಮದಡಿ ಎಲ್ & ಟಿ ಸಂಸ್ಥೆ ದೇಶೀಯವಾಗಿ ವಿನ್ಯಾಸಗೊಳಿಸಿ ನಿರ್ಮಿಸುತ್ತಿರುವ ನಾಲ್ಕು ಬಹು ಉದ್ದೇಶಿತ ನೌಕೆಗಳ ಪೈಕಿ 'ಸಮರ್ಥಕ್' ಮೊದಲನೆಯದ್ದಾಗಿದೆ. ಈ ನೌಕೆಯನ್ನು ಮುಖ್ಯವಾಗಿ ಸಮುದ್ರಗಸ್ತು ಮತ್ತು ಕರಾವಳಿ ನಿಗಾ ಕಾರ್ಯಗಳಿಗಾಗಿ ವಿನ್ಯಾಸಗೊಳಿಸಲಾಗಿದೆ.
ಸುಮಾರು 107 ಮೀಟರ್ ಉದ್ದ ಹಾಗೂ 18.6 ಮೀಟರ್ ಅಗಲ ಹೊಂದಿರುವ 'ಸಮರ್ಥಕ್' 3,750 ಟನ್ಗಿಂತ ಹೆಚ್ಚಿನ ಸ್ಥಳಾಂತರ ಸಾಮರ್ಥ್ಯ ಹೊಂದಿದೆ. ಗರಿಷ್ಠ 15 ನಾಟ್ಸ್ ವೇಗದಲ್ಲಿ ಸಂಚರಿಸಬಲ್ಲ ಈ ನೌಕೆ, ಶೇಕಡ 75ಕ್ಕಿಂತ ಹೆಚ್ಚು ಸ್ವದೇಶಿ ಅಂಶಗಳನ್ನು ಒಳಗೊಂಡಿದೆ. ಭವಿಷ್ಯದಲ್ಲಿ ನೌಕಾಪಡೆ ಬಳಸಲಿರುವ ಶಸ್ತ್ರಾಸ್ತ್ರಗಳು, ರೇಡಾರ್ಗಳು, ಸಂವೇದಕಗಳು ಮತ್ತು ಇತರ ತಂತ್ರಜ್ಞಾನಗಳನ್ನು ಸಮುದ್ರದಲ್ಲೇ ಪರೀಕ್ಷಿಸಲು ಇದು ಪ್ರಮುಖ ವೇದಿಕೆಯಾಗಲಿದೆ.