ಬೆಂಗಳೂರು, ಅ.16 (DaijiworldNews/AK): ನೇಹಾ ಬೋರಾಗೆ ಬಾಂಗ್ಲಾ ದೇಶ, ನೇಪಾಳ ದಂಗೆಯೇ ಮಾದರಿ. ಫ್ರಾನ್ಸ್ ಗೊಂದಲವೇ ಮಾದರಿ. ರಾಹುಲ್ ಗಾಂಧಿಯವರು ಇಂಥ ದೇಶದ್ರೋಹಿಗಳ ಜೊತೆ ಸೇರಿ ಇಷ್ಟೊಂದು ಅಸಹಾಯಕರಾದುದು ಯಾಕೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಪ್ರಶ್ನಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ , ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಸಾಧ್ಯವಾಗದು.ನಮ್ಮ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಸಾಧ್ಯವಾಗದು ಎಂದು ತಿಳಿಸಿದರು. ದೇಶದ ಜನರು ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿದ್ದಾರೆ. ಕಾಂಗ್ರೆಸ್ ಪಕ್ಷ ದೇಶದ ಜನರಿಂದ ದೂರವಾದುದೇಕೆ ಎಂದು ವಿಮರ್ಶೆ ಮಾಡಿ ಎಂದು ಕಿವಿಮಾತು ಹೇಳಿದರು.
ಸರಕಾರ, ಪ್ರಿಯಾಂಕ್ ಖರ್ಗೆಗೆ ಆತಂಕವೇಕೆ?
ಕೆಪಿಎಸ್ಸಿ ಹಗರಣದ ತನಿಖಾಧಿಕಾರಿ ಅಲೋಕ್ ಕುಮಾರ್ ಅವರನ್ನು ದೂರ ಇಟ್ಟ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಹಿಂದೆ ಸಿದ್ದರಾಮಯ್ಯ ಅವರು ಲೋಕಾಯುಕ್ತವನ್ನು ಮುಚ್ಚಿಹಾಕಿದ್ದರು. ಎಸಿಬಿಯನ್ನು ರಚಿಸಿ ಆಯಕಟ್ಟಿನ ಸ್ಥಳಗಳಲ್ಲಿ ಅವರಿಗೆ ಬೇಕಾದ ಅಧಿಕಾರಿಗಳನ್ನು ನೇಮಿಸಿ ಕ್ಲೀನ್ ಚಿಟ್ ಪಡೆದುದನ್ನು ನೋಡಿದ್ದೇವೆ. ಈಗಲೂ ಅದೇ ಪ್ರಯತ್ನ ನಡೆಯುತ್ತಿದೆ. ರಾಜ್ಯ ಹೈಕೋರ್ಟ್ ಕೆಲವು ಪ್ರಾಮಾಣಿಕ ಅಧಿಕಾರಿಗಳನ್ನು ನೇಮಿಸಿ ಎಸ್ಐಟಿ ರಚಿಸಿತ್ತು. ಆದರೆ, ಕಾಂಗ್ರೆಸ್ ಸರಕಾರ, ಪ್ರಿಯಾಂಕ್ ಖರ್ಗೆಯವರಿಗೆ ಆತಂಕ ಆದುದೇಕೆ ಎಂದು ಕೇಳಿದರು.
ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಿ ಅಲೋಕ್ ಕುಮಾರ್, ಇತರ ಪ್ರಾಮಾಣಿಕ ಅಧಿಕಾರಿಗಳನ್ನು ಕೈಬಿಡುವ ಷಡ್ಯಂತ್ರ ಮಾಡುತ್ತಿದ್ದಾರೆ. ಕೆಪಿಎಸ್ಸಿ ಹಗರಣದಲ್ಲಿ ಪ್ರಿಯಾಂಕ್ ಖರ್ಗೆ ಪಾತ್ರದ ಚರ್ಚೆ ಆಗುತ್ತಿತ್ತು. ಅದಕ್ಕೆ ಪುಷ್ಟಿ ಕೊಡುವ ಕೆಲಸವನ್ನು ಕಾಂಗ್ರೆಸ್ ಸರಕಾರವೇ ಮಾಡುತ್ತಿದೆ ಎಂದು ಟೀಕಿಸಿದರು.
ಪ್ರಿಯಾಂಕ್ ಖರ್ಗೆಯವರು ಬಿಜೆಪಿ ಕಡೆ ಬೆಟ್ಟು ಮಾಡಿ ಆರೋಪ ಮಾಡುತ್ತಿದ್ದರು. ನಿಮಗೆ ನಿಜವಾದಲೂ ಪ್ರಾಮಾಣಿಕತೆ ಇದ್ದರೆ ಕೆಪಿಎಸ್ಸಿಯ ಹಗರಣದ ತನಿಖೆಯ ಇಚ್ಛಾಶಕ್ತಿ ಇದ್ದರೆ ಹೈಕೋರ್ಟ್ ಯಾವ ಅಧಿಕಾರಿಗಳನ್ನು ನೇಮಿಸಿದೆಯೋ ಅದೇ ಅಧಿಕಾರಿಗಳಿಂದ ತನಿಖೆ ಮಾಡಿಸಿ ಎಂದು ಆಗ್ರಹಿಸಿದರು. ಹಗರಣವನ್ನು ಮುಚ್ಚಿ ಹಾಕುವ ಷಡ್ಯಂತ್ರ ನಡೆದಿದೆ ಎಂದು ಆಕ್ಷೇಪಿಸಿದರು.
ಸ್ಟಿಂಗ್ ಆಪರೇಷನ್ ಕಲಾವಿದರು ಯಾರೆಂದು ಗೊತ್ತಿದೆ.
ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ಮಾಡುವ ಕಲಾವಿದರು ಯಾರೆಂದು ಜನತೆಗೆ ಗೊತ್ತಿದೆ. ಕಾಂಗ್ರೆಸ್ ಸರಕಾರದ ಸಚಿವರೇ ಇವತ್ತು ಭಯಭೀತರಾಗಿದ್ದಾರೆ. ತಮ್ಮ ಕರ್ಮಕಾಂಡವನ್ನು ಅವರ ಪಕ್ಷದವರೇ ಹೊರಕ್ಕೆ ತರುವ ಭಯ ಅವರಲ್ಲಿದೆ. ಸ್ವತಃ ಮುಖ್ಯಮಂತ್ರಿಗಳು ಮೌನ ತಾಳಿದ್ದಾರೆ. ಇದೆಲ್ಲದಕ್ಕೂ ಇತಿಶ್ರೀ ಹಾಡಲು ಸಮರ್ಪಕ ತನಿಖೆ ಆಗಲಿ ಎಂದು ಒತ್ತಾಯಿಸಿದರು. ಸತ್ಯಾಂಶ ಹೊರಕ್ಕೆ ಬರಲು ಸಿಬಿಐ ತನಿಖೆ ಮಾಡಿಸಿ ಎಂದು ಆಗ್ರಹವನ್ನು ಮುಂದಿಟ್ಟರು. ಆಡಳಿತ ಪಕ್ಷ ಎಲ್ಲವನ್ನೂ ಗೌಪ್ಯವಾಗಿ ಇಡುವ ಗುಮಾನಿ ಎಲ್ಲರನ್ನೂ ಕಾಡುತ್ತಿದೆ ಎಂದರು.