ನವದೆಹಲಿ, ಅ.16 (DaijiworldNews/AK): ಕೇಂದ್ರ ಸರ್ಕಾರ ಪೆಟ್ರೋಲ್, ಡೀಸಲ್ ಮತ್ತು ವಿಮಾನ ಇಂಧನಗಳ ಮೇಲಿನ ರಫ್ತು ಸುಂಕವನ್ನು ಪರಿಷ್ಕರಿಸಿದೆ. ಪೆಟ್ರೋಲ್ ಮೇಲಿನ ವಿಂಡ್ಫಾಲ್ ಟ್ಯಾಕ್ಸ್ ಅಥವಾ ಹೆಚ್ಚುವರಿ ಲಾಭ ತೆರಿಗೆ ಅಥವಾ ರಫ್ತು ಸುಂಕವನ್ನು ಹೆಚ್ಚಿಸಿದೆ. ಅದೇ ವೇಳೆ, ಡೀಸಲ್ ಮೇಲಿನ ರಫ್ತು ಸುಂಕವನ್ನು ಕಡಿಮೆ ಮಾಡಿದೆ. ಇನ್ನು, ವಿಮಾನ ಇಂಧನ ಅಥವಾ ಜೆಟ್ ಫೂಯೆಲ್ ಅಥವಾ ಎಟಿಎಫ್ ಮೇಲಿನ ರಫ್ತು ಸುಂಕವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಿದೆ. ಆದರೆ, ದೇಶೀಯವಾಗಿ ಪೂರೈಕೆಯಾಗುವ ಇಂಧನಗಳ ಮೇಲಿನ ಸುಂಕಗಳಲ್ಲಿ ಯಾವುದೇ ಬದಲಾವಣೆ ಇಲ್ಲ.

ವರದಿಗಳ ಪ್ರಕಾರ, ಒಂದು ಲೀಟರ್ ಪೆಟ್ರೋಲ್ ಮೇಲೆ ರಫ್ತು ಸುಂಕ 50 ಪೈಸೆ ಮಾತ್ರ ಇತ್ತು. ಅದನ್ನು ಎರಡೂವರೆ ರುಪಾಯಿಗೆ ಏರಿಸಲಾಗಿದೆ. ಇನ್ನೊಂದೆಡೆ, ಡೀಸಲ್ ಮೇಲಿನ ರಫ್ತು ಸುಂಕವನ್ನು ಲೀಟರ್ಗೆ 16 ರೂ ಇದ್ದದ್ದು 8.5 ರೂಗೆ ಇಳಿಸಲಾಗಿದೆ. ಎಟಿಎಫ್ ಇಂಧನದ ಮೇಲಿನ ಸುಂಕವು 10.5 ರೂನಲ್ಲಿ ಮುಂದುವರಿಯುತ್ತದೆ.
ಒಂದು ಸರಕನ್ನು ಸಾಕಷ್ಟು ದಾಸ್ತಾನು ಮಾಡಿಕೊಂಡಿರುವ ಸಂದರ್ಭದಲ್ಲಿ, ಆ ಸರಕಿನ ಬೆಲೆ ದಿಢೀರನೇ ಬಹಳಷ್ಟು ಹೆಚ್ಚಾದಾಗ ಸಂಸ್ಥೆಗೆ ನಿರೀಕ್ಷೆ ಮೀರಿದ ಲಾಭ ಸಿಗುತ್ತದೆ. ಇದನ್ನೇ ವಿಂಡ್ಫಾಲ್ ಪ್ರಾಫಿಟ್ ಎನ್ನುವುದು. ಈ ಲಾಭದ ಮೇಲೆ ಹಾಕುವ ತೆರಿಗೆಯೇ ವಿಂಡ್ಫಾಲ್ ಟ್ಯಾಕ್ಸ್. ಸದ್ಯ ಪೆಟ್ರೋಲ್ ಮೇಲೆ ಹಾಕಲಾಗಿರುವುದು ಇದೇ ತೆರಿಗೆಯನ್ನು.
ಈಗ ಮಾಡಿರುವ ಪರಿಷ್ಕೃತ ತೆರಿಗೆಗಳು ಅಕ್ಟೋಬರ್ 16ರಿಂದ ಆರಂಭಗೊಂಡು 15 ದಿನಗಳವರೆಗೆ ಇರುತ್ತದೆ. ಅಥವಾ ತಿಂಗಳಾಂತ್ಯದವರೆಗೂ ಇರುತ್ತದೆ. ಪಶ್ಚಿಮ ಏಷ್ಯಾದಲ್ಲಿ ಯುದ್ಧ ಶುರುದಾಗಿನಿಂದ ಸರ್ಕಾರ ತಿಂಗಳಲ್ಲಿ ಎರಡು ಬಾರಿ ಈ ಸುಂಕವನ್ನು ಪರಿಷ್ಕರಿಸುತ್ತದೆ.