ಬೆಂಗಳೂರು, ನ.25 (DaijiworldNews/AA): ನಂದಿನಿ ಮೊಸರಿನ ದರವನ್ನು ಇಳಿಸುವಂತೆ ಸಿಎಂ ಡಿ.ಕೆ. ಶಿವಕುಮಾರ್ ಅವರು ಸೂಚನೆ ನೀಡಿ 20 ದಿನಗಳು ಕಳೆದರೂ, ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್) ಇನ್ನೂ ದರ ಕಡಿತಗೊಳಿಸದಿರುವುದು ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗಿದೆ.

ಹಾಲಿನ ಕೊಬ್ಬಿನಾಂಶಕ್ಕೆ ಅನುಗುಣವಾಗಿ ಪ್ರತಿ ಲೀಟರ್ ಹಾಲಿನ ದರವನ್ನು 8 ರೂ.ಗಳಿಂದ 14 ರೂ.ಗಳವರೆಗೆ ಹೆಚ್ಚಿಸಲಾಗಿತ್ತು. ಇದರ ಜೊತೆಗೆ, ಮೊಸರಿನ ದರವನ್ನೂ ಪ್ರತಿ ಲೀಟರ್ಗೆ 14 ರೂ. ಹಾಗೂ ಅರ್ಧ ಲೀಟರ್ ಪ್ಯಾಕೆಟ್ಗೆ 6 ರೂ. ಹೆಚ್ಚಿಸಲಾಗಿತ್ತು.
ಬೆಲೆ ಏರಿಕೆಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ಮೊಸರಿನ ದರವನ್ನು ಕನಿಷ್ಠ 2 ರೂ.ಗಳಷ್ಟಾದರೂ ಇಳಿಸುವಂತೆ ಸಿಎಂ ಶಿವಕುಮಾರ್ ಅವರು ಕೆಎಂಎಫ್ಗೆ ನಿರ್ದೇಶನ ನೀಡಿದ್ದರು. ಆದರೆ, ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.
ಸರ್ಕಾರದ ಈ ವಿಳಂಬ ಧೋರಣೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಮುಖ್ಯಮಂತ್ರಿಗಳ ಮಾತಿಗೇ ಬೆಲೆ ಇಲ್ಲದಂತಾಗಿದೆ ಎಂದು ಗ್ರಾಹಕರು ಟೀಕಿಸುತ್ತಿದ್ದಾರೆ.
ಮೊಸರಿನ ದರ ಇಳಿಕೆಯಲ್ಲಿ ಆಗಿರುವ ವಿಳಂಬದ ಕುರಿತು ಪ್ರತಿಕ್ರಿಯಿಸಿರುವ ಕೆಎಂಎಫ್ ಆಡಳಿತಾಧಿಕಾರಿ ಎಂ.ವಿ. ವೆಂಕಟೇಶ್, ಜಿಲ್ಲಾ ಹಾಲು ಒಕ್ಕೂಟಗಳೊಂದಿಗೆ ಮಾತುಕತೆ ನಡೆಯುತ್ತಿರುವುದರಿಂದ ವಿಳಂಬವಾಗಿದೆ. ಈವರೆಗೆ ಯಾವುದೇ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ.