ಬೆಂಗಳೂರು/ಚಿಕ್ಕಮಗಳೂರು, ನ.25 (DaijiworldNews/AK): 2023ರ ವಿಧಾನಸಭೆ ಚುನಾವಣೆಯ ವೇಳೆ ಅಂಚೆ ಮತಪತ್ರಗಳನ್ನು ತಿರುಚಿದ ಆರೋಪಕ್ಕೆ ಸಂಬಂಧಿಸಿದಂತೆ ಶೃಂಗೇರಿ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಡಿ.ಎನ್. ಜೀವರಾಜ್, ಚಿಕ್ಕಮಗಳೂರಿನ ಮಾಜಿ ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಮತ್ತು ಚುನಾವಣಾಧಿಕಾರಿ ವೇದಮೂರ್ತಿ ಟಿ.ಆರ್. ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.

ಮೂಲ ಮತ ಎಣಿಕೆ ನಡೆದ ಸುಮಾರು ಮೂರು ವರ್ಷಗಳ ಬಳಿಕ ದೂರು ದಾಖಲಿಸಿರುವುದಕ್ಕೆ ಸೂಕ್ತ ಕಾರಣ ನೀಡದಿರುವುದು ಹಾಗೂ ಚುನಾವಣಾ ವಿವಾದದಲ್ಲಿ ನಡೆದಿರುವ ಬೆಳವಣಿಗೆಗಳನ್ನು ಪರಿಗಣಿಸಿದಾಗ ಕ್ರಿಮಿನಲ್ ವಿಚಾರಣೆ ಮುಂದುವರಿಸುವುದು ಸಮರ್ಥನೀಯವಲ್ಲ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅಭಿಪ್ರಾಯಪಟ್ಟಿದ್ದಾರೆ.
ಮರು ಎಣಿಕೆಯ ಬಳಿಕ ಫಲಿತಾಂಶ ಪ್ರಕಟವಾಗಿದ್ದು, ಅದರಲ್ಲಿ ಅಭ್ಯರ್ಥಿಯೊಬ್ಬರು ಸೋತು, ಆರೋಪಿ ನಂಬರ್ 2 ಗೆಲುವು ಸಾಧಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಸ್ಥಳೀಯ ಪೊಲೀಸರಿಂದ ದೂರಿನ ಆಧಾರದ ಮೇಲೆ ತನಿಖೆ ನಡೆಸಲು ಸಾಧ್ಯವಿಲ್ಲ. ನಿಸ್ಸಂದೇಹವಾಗಿ ಇದು ವಿಳಂಬದ ಕಾರಣದಿಂದ ಅನೂರ್ಜಿತವಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ.
ಆರೋಪಿಗಳು ಸಲ್ಲಿಸಿದ್ದ ಮೂರು ಅರ್ಜಿಗಳನ್ನು ಪುರಸ್ಕರಿಸಿದ ಹೈಕೋರ್ಟ್, ಚಿಕ್ಕಮಗಳೂರು ಟೌನ್ ಪೊಲೀಸರು ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ಗಳಾದ 143, 465, 468, 471, 120B ಮತ್ತು 149 ಹಾಗೂ ಜನಪ್ರತಿನಿಧಿ ಕಾಯ್ದೆ-1951ರ ಸೆಕ್ಷನ್ 136ರ ಅಡಿಯಲ್ಲಿ ದಾಖಲಿಸಿದ್ದ ಎಫ್ಐಆರ್ ಅನ್ನು ರದ್ದುಗೊಳಿಸಿದೆ.
2023ರ ವಿಧಾನಸಭೆ ಚುನಾವಣೆಯಲ್ಲಿ ಶೃಂಗೇರಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ವಿರುದ್ಧ ಜೀವರಾಜ್ ಸ್ಪರ್ಧಿಸಿದ್ದರು. 2023ರ ಮೇ 13ರಂದು ನಡೆದ ಮತ ಎಣಿಕೆಯ ಬಳಿಕ ರಾಜೇಗೌಡ ಅವರು ವಿಜೇತರೆಂದು ಘೋಷಿಸಲಾಗಿತ್ತು. ಈ ವೇಳೆ 279 ಅಂಚೆ ಮತಪತ್ರಗಳನ್ನು ತಿರಸ್ಕರಿಸಲಾಗಿತ್ತು. ಇದನ್ನು ಪ್ರಶ್ನಿಸಿ ಜೀವರಾಜ್ ಹೈಕೋರ್ಟ್ನಲ್ಲಿ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು.
ಈ ವರ್ಷದ ಏಪ್ರಿಲ್ 6ರಂದು ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ತಿರಸ್ಕೃತಗೊಂಡಿದ್ದ 279 ಅಂಚೆ ಮತಪತ್ರಗಳನ್ನು ಮರುಪರಿಶೀಲಿಸುವಂತೆ ಹಾಗೂ ಎಲ್ಲ ಅಂಚೆ ಮತಪತ್ರಗಳ ಮರು ಎಣಿಕೆ ನಡೆಸುವಂತೆ ಚುನಾವಣಾಧಿಕಾರಿಗೆ ಆದೇಶಿಸಿತ್ತು. ಅದರಂತೆ ಮೇ 2ರಂದು ಮರುಪರಿಶೀಲನೆ ಮತ್ತು ಮರು ಎಣಿಕೆ ನಡೆದ ಬಳಿಕ ಜೀವರಾಜ್ ಅವರನ್ನು ವಿಜೇತ ಅಭ್ಯರ್ಥಿ ಎಂದು ಘೋಷಿಸಲಾಗಿತ್ತು.
ಇದಾದ ಮರುದಿನವೇ ರಾಜೇಗೌಡ ಅವರ ಚುನಾವಣಾ ಏಜೆಂಟ್ ಹಾಗೂ ಅಧಿಕೃತ ಪ್ರತಿನಿಧಿ ಸುಧೀರ್ ಕುಮಾರ್ ಮುರೊಳ್ಳಿ ಅವರು ದೂರು ದಾಖಲಿಸಿದ್ದರು. 2023ರಲ್ಲಿ ನಡೆದ ಮೂಲ ಮತ ಎಣಿಕೆಯ ಬಳಿಕ ಅಂಚೆ ಮತಪತ್ರಗಳನ್ನು ತಿರುಚಲಾಗಿದೆ ಎಂದು ಅವರು ಆರೋಪಿಸಿದ್ದರು.