ಕಲಬುರಗಿ,ನ.25 (DaijiworldNews/AK): ದೇಶದ ಸಾಂವಿಧಾನಿಕ ಸಂಸ್ಥೆಗಳನ್ನು ಕಾಂಗ್ರೆಸ್ ಅಪಮಾನ ಮಾಡುತ್ತಿದೆ. ಆದರೆ ಸಾಂವಿಧಾನಿಕ ಸಂಸ್ಥೆಗಳನ್ನು ಉಳಿಸುವ ಸಂಕಲ್ಪವನ್ನು ಬಿಜೆಪಿ ಮಾಡಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಹೇಳಿದರು.

ಕಲಬುರಗಿಯಲ್ಲಿ ಹಮ್ಮಿಕೊಂಡಿದ್ದ ʼಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಅಳಿಸಿʼ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ದೇಶದ ಸಂವಿಧಾನವನ್ನು ಉಳಿಸುವ ಮಹತ್ವದ ಜವಾಬ್ದಾರಿ ನಮ್ಮ ಮೇಲಿದೆ. ಅದನ್ನು ಉಳಿಸುವ ಸಂಕಲ್ಪ ಮಾಡೋಣ. ಪ್ರಜಾಪ್ರಭುತ್ವವನ್ನು ಉಳಿಸುವ ವಿಶ್ವಾಸ ನಮ್ಮೆಲ್ಲರಲ್ಲಿರಲಿ ಎಂದು ಹೇಳಿದರು.
ಅಧಿಕಾರದ ಮೇಲೆಯೇ ಕಣ್ಣಿಟ್ಟ ಕಾಂಗ್ರೆಸ್
ಕಾಂಗ್ರೆಸ್ನ ರಾಜಕೀಯ ವಿರುದ್ಧ ಇಡೀ ದೇಶದ ಜನರು ಧ್ವನಿ ಎತ್ತಬೇಕಾಗಿದೆ. ರಾಜಕೀಯ ದುರದ್ದೇಶವಿಟ್ಟುಕೊಂಡೇ ಕಾಂಗ್ರೆಸ್ ಕೆಲಸ ಮಾಡುತ್ತಿದೆ. ದೇಶದ ವಿದ್ಯಾವಂತ ಇದರ ವಿರುದ್ಧ ಹೋರಾಟ ಮಾಡಬೇಕು ಎಂದು ಕರೆ ನೀಡಿದರು.
ಸ್ವಾತಂತ್ರ್ಯ ಬಂದ ನಂತರ ಹಲವಾರು ಮಹನೀಯರ ಶ್ರಮದಿಂದ ಸಂವಿಧಾನ ರಚನೆಯಾಯಿತು. ನಾಳೆ ಸಂವಿಧಾನ ದಿನ ಆಚರಿಸಲಾಗುತ್ತಿದೆ. ಈ ಪ್ರಜಾಪ್ರಭುತ್ವವನ್ನು ಉಳಿಸುವ ಮಹತ್ವದ ಜವಾಬ್ದಾರಿ ದೇಶದ ಜನರ ಮೇಲಿದೆ. ಪ್ರಜಾಪ್ರಭುತ್ವದಿಂದ ದೇಶದ ನಾಗರಿಕರಿಗೆ ಸಮಾನ ಅಧಿಕಾರ, ಜನಪ್ರತಿನಿಧಿಗಳ ಆಯ್ಕೆ ಅಧಿಕಾರ ಸಿಕ್ಕಿದೆ. ಆದರೆ ಕಾಂಗ್ರೆಸ್ ಅಧಿಕಾರದ ಮೇಲೆಯೇ ಕಣ್ಣಿಟ್ಟು ಕೂತಿದೆ. ಅಧಿಕಾರಕ್ಕಾಗಿಯೇ ಕಚ್ಚಾಟ ಮಾಡುತ್ತಾ ಪ್ರಜಾಪ್ರಭುತ್ವವನ್ನು ನಾಶ ಮಾಡುವ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದರು.
ಮೂರು ಮಹಾತಪ್ಪು ಮಾಡಿದ ಕಾಂಗ್ರೆಸ್
ಕಾಂಗ್ರೆಸ್ ಅರವತ್ತು ವರ್ಷ ದೇಶ ಆಳಿದೆ. ಆದರೆ ಅಂದಿನಿಂದಲೂ ಅರಾಜಕತೆ ಸೃಷ್ಟಿಮಾಡುತ್ತಲೇ ಬಂದಿದೆ. ಇಂತಹ ಹಲವಾರು ತಪ್ಪುಗಳನ್ನು ಕಾಂಗ್ರೆಸ್ ಮಾಡುತ್ತಾ ಬಂದಿದೆ. ಪ್ರಮುಖವಾಗಿ ಮೂರು ಮಹಾತಪ್ಪು ಮಾಡಿದೆ. ಅದರಲ್ಲಿ ಪ್ರಮುಖವಾಗಿದ್ದು ಇಂದಿರಾ ಗಾಂಧಿ ಅವರು ದೇಶದಲ್ಲಿ ತುರ್ತುಪರಿಸ್ಥಿತಿ ಹೇರಿದ್ದು. ಏನು ತಪ್ಪು ಮಾಡದೇ ಇದ್ದವರನ್ನೂ ಜೈಲಿಗೆ ಹಾಕಿದರು. ಎರಡನೇಯದು ಸಿಖ್ ಹತ್ಯಾಕಾಂಡ. ಮೂರನೇಯದು ಸಾಂವಿಧಾನಿಕ ಸಂಸ್ಥೆಗಳ ಕಾರ್ಯನಿರ್ವಹಣೆಗೆ ಧಕ್ಕೆ ತಂದಿರುವುದು ಎಂದು ವಿವರಿಸಿದರು.
ಇವಿಎಂ ಮೇಲೆ ಆರೋಪ ಹೊರಿಸಿದ ಕಾಂಗ್ರೆಸ್ ಈಗ ಚುನಾವಣಾ ಆಯೋಗದ ಮೇಲೆ ಸಂದೇಹ ಪಡುತ್ತಿದ್ದಾರೆ. ಚುನಾವಣಾ ಆಯೋಗದ ಮೇಲೆ ಕಾಂಗ್ರೆಸ್ ತಪ್ಪು ಹೊರಿಸುತ್ತಿದೆ. ಕಾಂಗ್ರೆಸ್ ಹಲವು ರೀತಿಯಲಿ ವಿಫಲವಾಗಿದ್ದರೂ ಅದನ್ನು ಬಿಜೆಪಿ ಸರ್ಕಾರದ ಮೇಲೆ ಹಾಕುತ್ತಿದೆ ಎಂದರು.
ಕಾಂಗ್ರೆಸ್ಗೆ ದೇಶದಲ್ಲಿ ನಿಜವಾಗಿ ಏನು ನಡೆಯುತ್ತಿದೆ ಎಂದು ಗೊತ್ತಿದೆ. ಆದರೂ ಅವರು ಆರೋಪ ಮಾಡುವುದು ಬಿಡುವುದಿಲ್ಲ. ಆದರೆ ದೇಶದಲ್ಲಿ ಬಿಜೆಪಿ ಸರ್ಕಾರವೇ ಬರಬೇಕು ಜನರು ತೀರ್ಮಾನ ಮಾಡಿದ್ದಾರೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಭಾರತದ ಸಂವಿಧಾನ ನೀವು ಅಂದುಕೊಂಡಷ್ಟು ದುರ್ಬಲ ಇಲ್ಲ ಎಂಬುದನ್ನು ರಾಹುಲ್ ಗಾಂಧಿ ನೆನಪಿನಲ್ಲಿಟ್ಟುಕೊಳ್ಳಬೇಕು. ನಿಮ್ಮ ಪಕ್ಷದವರೇ ಸಂವಿಧಾನವನ್ನು ದುರ್ಬಲ ಮಾಡ್ತಾ ಇದ್ದಾರೆ. ಜನಸಾಮಾನ್ಯರು ಪ್ರಜಾಪ್ರಭುತ್ವದ ತಾಕತ್ತನ್ನು ಅರಿಯಬೇಕು ಪ್ರಜಾಪ್ರಭುತ್ವ ತಾಖತ್ತು ನಿಮ್ಮಂತ ಜನರಿಗೆ ಮಾತ್ರ ಗೊತ್ತಿದೆ ಎಂದರು.