ಬೆಂಗಳೂರು, ಜ.25 (Daijiworld News/PY) : "ತಮ್ಮ ವೈಫಲ್ಯದಿಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಕಬರ್ಸ್ತಾನ ಮಾಡಲು ಹೊರಟಿದ್ದಾರೆ" ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ತೆರಿಗೆ ಸಂಗ್ರಹ ಇಳಿಕೆ, ರಾಜ್ಯದಲ್ಲಿ ಸಂಪುಟ ವಿಸ್ತರಣೆ ವಿಳಂಬ, ಅನುದಾನ ಕೊರತೆ ಸೇರಿದಂತೆ ಅನೇಕ ವಿಷಯಗಳಿಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರು ಸರಣಿ ಟ್ವೀಟ್ ಮಾಡುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮ್ಮ ವೈಫಲ್ಯದಿಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಕಬರ್ಸ್ತಾನ ಮಾಡಲು ಹೊರಟಿರುವ ನರೇಂದ್ರ ಮೋದಿ ಅವರು ತಮ್ಮ ಅಸಾಮರ್ಥ್ಯವನ್ನು ಮುಚ್ಚಿಕೊಳ್ಳಲು ಪಾಕಿಸ್ತಾನದ ಜಪ ಮಾಡುತ್ತಿದ್ದಾರೆ. ತಮ್ಮ ನಾಯಕನ ಮೇಲ್ಪಂಕ್ತಿಯನ್ನು ಅನುಸರಿಸುತ್ತಿರುವ ರಾಜ್ಯದ ನಾಯಕರು ತಲೆಕೆಟ್ಟವರಂತೆ ಕೋಮುದ್ವೇಷಕ್ಕೆ ಪ್ರಚೋದನೆ ನೀಡತೊಡಗಿದ್ದಾರೆ ಎಂದು ಹೇಳಿದ್ದಾರೆ.
ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಗೂ ಕಾಸಿಲ್ಲದ ದುಸ್ಥಿತಿ ಕರ್ನಾಟಕ ಸರ್ಕಾರದ್ದು, ತೆರಿಗೆ ಸಂಗ್ರಹ ಇಳಿಯುತ್ತಿದೆ, ಸಾಲದ ಹೊರೆ ಹೆಚ್ಚಾಗುತ್ತಿದೆ, ಕೇಂದ್ರದ ಅನುದಾನದ ಬಾಕಿ ಏರುತ್ತಿದೆ. ಶೀಘ್ರದಲ್ಲಿ ನೌಕರರ ಸಂಬಳಕ್ಕೂ ತತ್ವಾರ ಬರಲಿದೆ. ಅಡ್ಡ ಕಸುಬಿಗಳ ಕೈಗೆ ಅಧಿಕಾರ ಕೊಟ್ಟರೆ ಇದೇ ಗತಿ ಎಂದು ತಿಳಿಸಿದ್ದಾರೆ.
ಹಣ ಇಲ್ಲದೆ ಅಭಿವೃದ್ಧಿ ಯೋಜನೆಗಳು ಸ್ಥಗಿತಗೊಂಡಿವೆ, ಗುತ್ತಿಗೆದಾರರು ಕಾಮಗಾರಿಗಳನ್ನು ಅರ್ಧಕ್ಕೆ ಬಿಟ್ಟು ಓಡಿಹೋಗುತ್ತಿದ್ದಾರೆ, ಖಾಲಿ ಖಜಾನೆ ತುಂಬಲು ರೈತರಿಂದ ಬಲತ್ಕಾರವಾಗಿ ಸಾಲ ವಸೂಲಿ ಮಾಡಲು ಪೀಡಿಸುತ್ತಿದ್ದಾರೆ. ಸುಭೀಕ್ಷೆಯಿಂದ ಇದ್ದ ರಾಜ್ಯ ಅರಾಜಕತೆಯತ್ತ ಭರದಿಂದ ಸಾಗಿದೆ ಎಂದರು.
ಕೇಂದ್ರ ಪ್ರಾಯೋಜತ್ವದ ಯೋಜನೆಗಳಿಗೆ ಅನುದಾನ ಬಿಡುಗಡೆಯಾಗುತ್ತಿಲ್ಲ, ತೆರಿಗೆ ಪಾಲು ಬರುತ್ತಿಲ್ಲ, ಜಿಎಸ್ಟಿ ಪರಿಹಾರ ಕೊಡುತ್ತಿಲ್ಲ. ಇತ್ತ ಸಂಪುಟ ವಿಸ್ತರಣೆಗೂ ಒಪ್ಪಿಗೆ ಕೊಡ್ತಿಲ್ಲ. ಕರ್ನಾಟಕದ ಬಗ್ಗೆ ಮೋದಿ-ಶಾ ಜೋಡಿಗೆ ಯಾಕಿಷ್ಟು ಸಿಟ್ಟು ಎಂದು ಕೇಳಿದ್ದಾರೆ.
ಸಂಪುಟ ವಿಸ್ತರಣೆ, ಅತೃಪ್ತರ ಓಲೈಕೆ, ಹೈಕಮಾಂಡ್ಗೆ ಮೊರೆ, ಭಿನ್ನಮತೀಯರಿಗೆ ಸಮಾಧಾನ ಇವಿಷ್ಟೇ ಕೆಲಸದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಆರು ತಿಂಗಳು ಕಳೆದಿದ್ದಾರೆ. ಆಡಳಿತ ಕೈಗೆ ಸಿಗುತ್ತಿಲ್ಲ, ಹೈಕಮಾಂಡ್ ಕ್ಯಾರೇ ಅನ್ನುತ್ತಿಲ್ಲ ಯಡಿಯೂರಪ್ಪಮುಳುಗುತ್ತಿದ್ದಾರೆ, ಜೊತೆಗೆ ರಾಜ್ಯವನ್ನೂ ಮುಳುಗಿಸಲು ಹೊರಟಿದ್ದಾರೆ’ ಎಂದು ಹ್ಯಾಷ್ಟ್ಯಾಗ್ ಹಾಕಿ ಟ್ವೀಟ್ ಮಾಡಿದ್ದಾರೆ.
ಇಪ್ಪತ್ತು ವರ್ಷಗಳಲ್ಲಿಯೇ ಮೊದಲ ಬಾರಿ ಕೇಂದ್ರ ಸರ್ಕಾರದ ವರಮಾನ ಇಳಿಕೆಯಾಗುತ್ತಿದೆ. ರಾಜ್ಯದಲ್ಲಿಯೂ ಅದೇ ಸ್ಥಿತಿ. ಪ್ರಧಾನಿ ನರೇಂದ್ರ ಮೋದಿ ದೇಶವನ್ನು, ಬಿಎಸ್ವೈ ಅವರು ರಾಜ್ಯವನ್ನು ದಿವಾಳಿ ಮಾಡಲು ನಿರ್ಧಾರ ಮಾಡಿದ ಹಾಗಿದೆ ಎಂದು ಟ್ವೀಟ್ನಲ್ಲಿ ಉಲ್ಲೇಖಿಸಿದ್ದಾರೆ.
ಮುಖ್ಯಮಂತ್ರಿ ಬಿಎಸ್ವೈ ಅವರನ್ನು ಹತಾಶರನ್ನಾಗಿಸಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಮೋದಿ-ಶಾ ಜೋಡಿ ಅವರನ್ನು ದಂಡಿಸುತ್ತಿದೆಯೇ? ಬಿಜೆಪಿಯ ಆಂತರಿಕ ಕಲಹಕ್ಕೆ ರಾಜ್ಯದ ಜನ ಬಲಿಪಶುಗಳಾಗುತ್ತಿದ್ದಾರೆ ಎಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ.
ರಾಜ್ಯದ ಖಜಾನೆ ಖಾಲಿಯಾಗುತ್ತಿದೆ, ಅಧಿಕಾರಿಗಳು ಬಜೆಟ್ ಮಾಡುವುದು ಹೇಗೆ ಎಂದು ತಲೆಮೇಲೆ ಕೈಯಿಟ್ಟು ಕೂತಿದ್ದಾರೆ. ಯಡಿಯೂರಪ್ಪನವರೇ, ಕೈಲಾಗದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ, ರಾಜ್ಯದ ಹಿತ ಬಲಿಕೊಡಬೇಡಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.