ನವದೆಹಲಿ, ಮಾ.08 (DaijiworldNews/PY) : ವಿಶ್ವ ಮಹಿಳಾ ದಿನಾಚರಣೆಯಂದು ಸಾಧಕ ಮಹಿಳೆಯರಿಗೆ ಒಂದು ದಿನದ ಮಟ್ಟಿಗೆ ತಮ್ಮ ಸಾಮಾಜಿಕ ಮಾಧ್ಯಮವನ್ನು ಬಿಟ್ಟುಕೊಡುತ್ತೇನೆ ಎಂದು ಹೇಳಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಮಾತಿನಂತೆ ನಡೆದುಕೊಂಡಿದ್ದಾರೆ.

ಬಿಹಾರದ ಸರ್ಪಂಚ್ ವೀಣಾ ದೇವಿ: ಮನಸ್ಸಿದ್ದರೆ ಮಾರ್ಗ, ಇಚ್ಛಾಶಕ್ತಿಯಿದ್ದರೆ ಎಲ್ಲವನ್ನೂ ಸಾಧಿಸಬಹುದು. ನನ್ನ ವ್ಯವಸಾಯವು ಒಂದು ಕಿ.ಗ್ರಾ ಅಣಬೆ ಕೃಷಿ ಮಾಡು ಮುಖಾಂತರ ಪ್ರಾರಂಭವಾಗಿತ್ತು. ನಾನು ಈ ಕೃಷಿಯಿಂದ ಆರ್ಥಿಕವಾಗಿ ಶಕ್ತಳಾಗಿದ್ದು ಮಾತ್ರವಲ್ಲದೇ ಆತ್ಮವಿಶ್ವಾಸವೂ ನನ್ನಲ್ಲಿ ಹೆಚ್ಚಿತ್ತು ಎಂದು ವೀಣಾ ದೇವಿ ಅವರು ಹೇಳಿದ್ದಾರೆ.
ಕಾನ್ಪುರದ ಕಲಾವತಿ ದೇವಿ : ನಾನು ವಾಸಮಾಡುತ್ತಿದ್ದ ಪ್ರದೇಶದ ಸುತ್ತಮುತ್ತ ಎಲ್ಲೆಡೆ ಕೊಳಕು ತುಂಬಿರುತ್ತಿತ್ತು. ನಾವು ಇದನ್ನು ಸ್ವಚ್ಚತಾ ಕಾರ್ಯಗಳನ್ನು ಮಾಡುವ ಮೂಲಕ ಬದಲಿಸಿದೆವು ಎನ್ನುವ ದೃಢ ವಿಶ್ವಾಸವನ್ನು ಹೊಂದಿದ್ದೆವು. ಜನರಿಗೆ ಮನವರಿಕೆ ಮಾಡುವ ಕೆಲಸ ಪ್ರಾರಂಭಿಸಿದೆವು. ಶೌಚಾಲಯ ನಿರ್ಮಿಸಲು ಹಣ ಸಂಗ್ರಹ ಮಾಡಿದೆವು. ಕೊನೆಗೆ ಈ ಕಾರ್ಯವನ್ನು ಸಾಧಿಸಿ ಬಿಟ್ಟೆವು ಎಂದು ಕಲಾವತಿಯವರು ಹೇಳುತ್ತಾರೆ.
ವಿಜಯಾ ಪವಾರ್: ನೀವು ದೇಶದ ವಿವಿಧ ಭಾಗಗಳಲ್ಲಿರುವ ಕರಕುಶಲ ಕಲೆಯ ಬಗ್ಗೆ ಕೇಳಿರುತ್ತೀರಿ. ನಾನಿಲ್ಲಿ ಮಹಾರಾಷ್ಟ್ರದ ಗ್ರಾಮೀಣ ಪ್ರದೇಶದಲ್ಲಿರುವ ಬಂಜಾರ ಸಮುದಾಯದ ಕರಕುಶಲ ಕಲೆಯ ಬಗ್ಗೆ ಹೇಳುತ್ತಿದ್ದೇನೆ. ನಾನು ಇದರಲ್ಲಿ ಕಳೆದ ಎರಡು ದಶಕಗಳಲ್ಲಿ ತೊಡಗಿದ್ದು, ನನ್ನೊಂದಿಗೆ ಸಾವಿರಕ್ಕೂ ಹೆಚ್ಚು ಮಹಿಳೆಯರು ಇದ್ದಾರೆ ಎಂದು ವಿಜಯ್ ಪವಾರ್ ಹೇಳಿದ್ದಾರೆ.
ಹೈದರಾಬಾದ್ನ ಕಲ್ಪನಾ ರಮೇಶ್: ಚಿಕ್ಕದೊಂದು ಪ್ರಯತ್ನ ದೊಡ್ಡ ಪರಿಣಾವನ್ನುಂಟು ಮಾಡುತ್ತದೆ. ನೀರು ಅಮೂಲ್ಯ. ಹಾಗಾಗಿ, ನಮ್ಮ ಮುಂದಿನ ಪೀಳಿಗೆಗೆ ನೀರು ಇಲ್ಲದಂತೆ ಮಾಡುವುದು ಬೇಡ. ನೀರನ್ನು ಜವಾಬ್ದಾರಿಯುತವಾಗಿ ಬಳಸೋಣ, ಮಳೆ ನೀರು ಸಂಗ್ರಹ, ಕೆರಗಳ ಉಳಿವು, ನೀರಿನ ಬಳಕೆ ಹಾಗೂ ಜಾಗೃತಿ ಮೂಡಿಸುವ ಕೆಲಸವನ್ನು ಕಲ್ಪನಾ ಅವರು ಮಾಡುತ್ತಿದ್ದಾರೆ. ಅಲ್ಲದೇ ಅವರು ವಾಸ್ತುಶಿಲ್ಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ಧಾರೆ.
ಕಾಶ್ಮೀರದ ಮಹಿಳೆ ಆರಿಫಾ: ಕಾಶ್ಮೀರದ ಆರಿಫಾ ಅವರು ಸ್ಥಳೀಯ ಮಹಿಳೆಯರ ಸಬಲೀಕರಣಕ್ಕಾಗಿ ನಮ್ದಾ ಕರಕುಶಲ ಕಲೆಯನ್ನು ಮಾಡುತ್ತಿದ್ದಾರೆ. ನಾನು ಮಹಿಳಾ ಕಲಾಕಾರರ ಪರಿಸ್ಥಿತಿಯನ್ನು ನೋಡಿದ್ದೇನೆ. ಹಾಗಾಗಿ ನಾನು ನಮ್ದಾ ಕರಕುಶಲ ಕಲೆಯಲ್ಲಿ ತೊಡಗಿಕೊಂಡಿದ್ದೇನೆ ಎನ್ನುತ್ತಾರೆ.
ಮಾಳವೀಕ ಐಯ್ಯರ್: 13ನೇ ವಯಸ್ಸಿನಲ್ಲಿ ಬಾಂಬ್ ಸ್ಫೋಟದಲ್ಲಿ ಕೈಗಳನ್ನು ಕಳೆದುಕೊಂಡು, ಹಲವು ಗಾಯಗಳಿಗೆ ತುತ್ತಾಗಿದ್ದೂ ಶಿಕ್ಷಣದಲ್ಲಿ ಸಾಧನರಗೈದ ಮಾಳವಿಕ ಅಯ್ಯರ್ ಅವರು ಪ್ರಧಾನಿ ಮೋದಿ ಅವರ ಸಾಮಾಜಿ ಮಾಧ್ಯಮದ ಮುಖಾಂತರ ತಮ್ಮ ವಿವರ ಹಂಚಿಕೊಂಡಿದ್ಧಾರೆ. ಅವರು ಶಿಕ್ಷಣ ಬದುಕಿನ ಅಗತ್ಯ ಎಂದು ನಂಬಿದ್ದು, ಯುವ ಸಮುದಾಯದಲ್ಲಿ ತಾರತಮ್ಯವನ್ನು ಹೋಗಲಾಡಿಸಬೇಕು ಎನ್ನುತ್ತಾರೆ. ವೈಕಲ್ಯವುಳ್ಳವರು ಇತರರ ಮೇಲೆ ಅವಲಂಭಿತರಲ್ಲ, ಅವರು ದುರ್ಬಲರಲ್ಲ, ಇತರರಿಗೆ ಮಾದರಿ ಎನ್ನುವುದನ್ನು ಸಮಾಜಕ್ಕೆ ತೋರಿಸಬೇಕಾಗಿದೆ. ನನ್ನ ವೈಕಲ್ಯವನ್ನು ಮೀರಿ, ಕೆಲಸ ಮಾಡಿದ್ದೇನೆ. ಪಿಎಚ್ಡಿ ಪಡೆದಿದ್ದೇನೆ ಎಂದಿದ್ಧಾರೆ.
ಸ್ನೇಹಾದಾಸ್: ಸಾಮಾಜಿಕ ಮಾಧ್ಯಮದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಒಂದು ದಿನದ ಮಟ್ಟಿಗೆ ನಿರ್ಗಮಿಸುತ್ತಿದ್ದಂತೆ, ಸ್ನೇಹ ಮೋಹನ್ ದಾಸ್ ಎಂಬ ಯುವತಿ ತಮ್ಮ ಸಾಮಾಜಿಕ ಕಾರ್ಯದ ಬಗ್ಗೆ ಹೇಳಿಕೊಂಡಿದ್ದಾರೆ. ಹಸಿದ ಮಕ್ಕಳಿಗೆ ಆಹಾರ ಒದಗಿಸುವ ತಮ್ಮ ಕಾರ್ಯದ ಬಗ್ಗೆ ಪ್ರಧಾನಿ ಮೋದಿ ಅವರ ಸಾಮಾಜಿಕ ಮಾಧ್ಯಮದ ಮುಖಾಂತರ ಹೇಳಿಕೊಂಡಿದ್ದಾರೆ.