ಬೆಂಗಳೂರು, ಜು 01(DaijiworldNews/PY): ದೇಶದಲ್ಲಿ ಹಸಿವಿನ ಸಮಸ್ಯೆ ಇನ್ನಷ್ಟು ಭೀಕರವಾಗಲಿದೆ. ಆದ್ದರಿಂದ ನಾವು ಜಾರಿಗೊಳಿಸಿದ್ದ ಅನ್ನಭಾಗ್ಯ ಯೋಜನೆಯನ್ನು ಇಡೀ ದೇಶದಲ್ಲಿ ಜಾರಿಗೆ ತರಬೇಕೆಂದು ಪ್ರಧಾನಿ ಮೋದಿ ಅವರನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಮಂಗಳವಾರ ಪ್ರಧಾನಿ ಮೋದಿ ಅವರ ಭಾಷಣದ ಬಳಿಕ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, ಕೊರೊನಾ ಸೋಂಕಿನ ತೀವ್ರತೆ ನೋಡಿದರೆ ಇದು 2-3 ತಿಂಗಳೊಳಗೆ ಕೊನೆಗೊಳ್ಳುವಂತಹದ್ದಲ್ಲ. ದೇಶದಲ್ಲಿ ಹಸಿವಿನ ಸಮಸ್ಯೆ ಇನ್ನಷ್ಟು ಭೀಕರವಾಗಲಿದೆ. ಆದ್ದರಿಂದ ನಾವು ಜಾರಿಗೊಳಿಸಿದ್ದ ಅನ್ನಭಾಗ್ಯ ಯೋಜನೆಯನ್ನು ಇಡೀ ದೇಶದಲ್ಲಿ ಜಾರಿಗೆ ತರಬೇಕೆಂದು ಪ್ರಧಾನಿ ಮೋದಿ ಅವರನ್ನು ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ.
ಬಾಯಿ ಬಿಟ್ಟರೆ ಬಣ್ಣಗೇಡು ಎಂಬಂತಾಗಿದೆ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣಗಳು. ನಿಯಂತ್ರಣ ಮೀರಿ ಹರಡುತ್ತಿರುವ ಕೊರೊನಾ ಸೋಂಕಿನಿಂದ ತತ್ತರಕ್ಕೀಡಾಗಿರುವ ಜನರಲ್ಲಿ ಆತ್ಮವಿಶ್ವಾಸ ತುಂಬುವ ಯಾವ ನಿರ್ದಿಷ್ಠ ಯೋಜನೆಗಳ ಪ್ರಸ್ತಾವಗಳೇ ಇಲ್ಲದ ಪ್ರಧಾನಿ ಭಾಷಣ ಕೈಲಾಗದ ನಾಯಕನ ಗೋಳಾಟದಂತಿತ್ತು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಬಡವರಿಗೆ ಉಚಿತ ಆಹಾರ ಧಾನ್ಯ ನೀಡುವ ಗರೀಬ್ ಕಲ್ಯಾಣ ಯೋಜನೆ ನವಂಬರ್ವರೆಗೆ ಮುಂದುವರಿಸಿರುವುದು ಸ್ವಾಗತಾರ್ಹ. ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಸೋನಿಯಾ ಗಾಂಧಿಯವರು ತಿಂಗಳ ಹಿಂದೆಯೇ ಈ ಬೇಡಿಕೆ ಇಟ್ಟಿದ್ದರು. ಅದನ್ನು ಒಪ್ಪಿಕೊಂಡದ್ದಕ್ಕೆ ಧನ್ಯವಾದಗಳು ಎಂದಿದ್ದಾರೆ.
ಆಸ್ಪತ್ರೆಗಳು ತುಂಬಿಹೋಗಿವೆ, ಆಮ್ಲಜನಕ ಪೂರೈಕೆ ವ್ಯವಸ್ಥೆ, ವೆಂಟಿಲೇಟರ್ಗಳ ತೀವ್ರ ಕೊರತೆ ಇದೆ. ದುಬಾರಿ ಚಿಕಿತ್ಸೆ ವೆಚ್ಚದಿಂದಾಗಿ ಕೊರೊನಾ ಸೋಂಕಿಗಿಂತ ಕೊರೊನಾ ಚಿಕಿತ್ಸೆಗೆ ಜನ ಹೆದರುವಂತಾಗಿದೆ. ಈ ಬಗ್ಗೆ ರಾಜ್ಯಗಳಿಗೆ ಕೇಂದ್ರ ನೆರವು ಘೋಷಿಸಬಹುದೆಂಬ ನಿರೀಕ್ಷೆ ಹುಸಿಯಾಗಿದೆ ಎಂದು ತಿಳಿಸಿದ್ದಾರೆ.
ಪಿಎಂ ಕೇರ್ಸ್ ನಿಧಿಗೆ ನೆರವಾಗಲು ದೇಶದ ಜನರನ್ನು ವಿನಂತಿಸಿದ್ದ ಪ್ರಧಾನಿ ಮೋದಿ ಅವರು, ಅದರ ಖರ್ಚು-ವೆಚ್ಚದ ವಿವರವನ್ನು ದೇಶದ ಮುಂದಿಟ್ಟು ಪಾರದರ್ಶಕವಾಗಿ ನಡೆದುಕೊಳ್ಳಬಹುದೆಂಬ ನಿರೀಕ್ಷೆಯೂ ಹುಸಿಯಾಗಿದೆ. ಇದಕ್ಕೆ ಚೀನಾದಿಂದಲೂ ದೇಣಿಗೆ ಪಡೆಯಲಾಗಿದೆ ಎಂಬ ಆರೋಪಗಳಿವೆ. ಈ ಬಗ್ಗೆ ಸ್ಪಷ್ಟೀಕರಣ ನೀಡಬೇಕಿತ್ತು ಎಂದಿದ್ದಾರೆ.
ಸತತ 23ನೇ ದಿನ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾಗಿದ್ದು, ಆಹಾರಧಾನ್ಯ,ತರಕಾರಿ ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆಯೂ ಏರುತ್ತಿದೆ. ಈ ತೈಲಬೆಲೆ ಇನ್ನೆಷ್ಟು ದಿನಗಳ ಕಾಲ ಏರಲಿದೆ ಎಂದಾದರೂ ಪ್ರಧಾನಿ ಮೋದಿ ಅವರು ಹೇಳಿಬಿಟ್ಟಿದ್ದರೆ ಜನ ಕೆಟ್ಟ ದಿನಗಳಿಗೆ ಹೊಂದಿಕೊಳ್ಳಲು ಸಿದ್ದವಾಗುತ್ತಿದ್ದರು ಎಂದು ಹೇಳಿದ್ದಾರೆ.
ಹುತಾತ್ಮ 20 ವೀರಯೋಧರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಘೋಷಿಸಿದ್ದ ಪ್ರಧಾನಿ ಮೋದಿ ಅವರು ಇದಕ್ಕಾಗಿ ಏನು ಮಾಡಿದ್ದಾರೆ ಎನ್ನುವುದನ್ನು ತಿಳಿಸಿದ್ದರೆ ನೊಂದ ದೇಶದ ಜನತೆ ಮತ್ತು ದು:ಖತಪ್ತ ವೀರಯೋಧರ ಕುಟುಂಬಕ್ಕೆ ಸಾಂತ್ವನ ಮಾಡಿದ ಹಾಗಾಗುತ್ತಿತ್ತು ಎಂದು ತಿಳಿಸಿದ್ದಾರೆ.