ಬೆಂಗಳೂರು, ಆ 14 (Daijiworld News/MSP): ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ರಾತ್ರೋರಾತ್ರಿ ಹಲವೆಡೆ ದಾಳಿ ನಡೆಸಿದ್ದು ಮತ್ತೆ 60 ಮಂದಿಯನ್ನು ಬಂಧಿಸಿದ್ದಾರೆ. ಇದರೊಂದಿಗೆ ಪ್ರಕರಣ ಸಂಬಂಧಪಟ್ತಂತೆ ಇಲ್ಲಿವರೆಗೆ 206 ಮಂದಿಯನ್ನು ಬಂಧಿಸಿದಂತಾಗಿದೆ. ಬಂಧನದ ಕುರಿತು ಬೆಂಗಳೂರು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.
ಅಖಂಡ ಶ್ರೀನಿವಾಸ ಮೂರ್ತಿ ಮನೆ, ಡಿಜೆಹಳ್ಳಿ, ಕೆಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ನಡೆದ ಗಲಭೆಯ ವಿಡಿಯೋ ಸಾಕ್ಷ್ಯಗಳ ಆಧಾರದಲ್ಲಿ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಇನ್ನು ವಶಕ್ಕೆ ಪಡೆದಿರುವ ಪ್ರತಿಯೊಬ್ಬ ಆರೋಪಿಯನ್ನೂ ಪ್ರತ್ಯೇಕವಾಗಿ ವಿಚಾರಣೆಗೊಳಪಡಿಸಿ, ಗಲಭೆಯಲ್ಲಿ ಅವರ ಪಾತ್ರದ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಎರಡು ಠಾಣೆಗಳಲ್ಲಿ 12 ಪ್ರಕರಣ ದಾಖಲಿಸಲಾಗಿದೆ. ಈ ಪೈಕಿ ಎರಡು ಪ್ರಕರಣಗಳನ್ನು ಸಿಸಿಬಿಗೆ ವಹಿಸಲಾಗಿದೆ.
ಇನ್ನು ಗುರುವಾರ 80 ಬಂಧಿತ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್ ಗೆ ಹಾಜರುಪಡಿಸಲಾಗಿದ್ದು ನ್ಯಾಯಾಲಯವು ಆರೋಪಿಗಳನ್ನು 15 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿ ಇರಿಸುವಂತೆ ಆದೇಶ ಹೊರಡಿಸಿದೆ.
ಬೆಂಗಳೂರಿನ ಕಾರಾಗೃಹದಲ್ಲಿಯೇ ಇರಿಸಿದರೆ ಗಲಾಟೆ ಸಾಧ್ಯತೆ ಹಿನ್ನಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿರಾತ್ರೋರಾತ್ರಿ 80 ಮಂದಿ ಆರೋಪಿಗಳನ್ನು ಕೆಎಸ್ಆರ್ ಟಿಸಿ ಬಸ್ ಗಳಲ್ಲಿ ಸಿಸಿಬಿ ಮತ್ತು ಕೆಎಸ್ಆರ್ ಪಿ ಸಿಬ್ಬಂದಿ ಭದ್ರತೆಯಲ್ಲಿ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗಿದೆ.