ಮುಂಬೈ, ಆ 14 (DaijiworldNews/PY): ಸುಶಾಂತ್ ಸಿಂಗ್ ಮ್ಯಾನೇಜರ್ ದಿಶಾ ಸಾಲ್ಯಾನ್ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಿಶಾ ತಂದೆ ಸತೀಶ್ ಸಾಲ್ಯಾನ್ ಅವರು ಮೂವರು ವ್ಯಕ್ತಿಗಳ ವಿರುದ್ದ ದೂರು ಸಲ್ಲಿಸಿರುವುದಾಗಿ ವರದಿ ತಿಳಿಸಿದೆ.
ದಿಶಾ ಸಾಲ್ಯಾನ್ ಹಾಗೂ ಸುಶಾಂತ್ ಸಿಂಗ್ ಸಾವಿನ ಬಗ್ಗೆ ಸಂಬಂಧ ಕಲ್ಪಿಸಿ ಸಾಮಾಜಿಕ ಜಾಲತಾಣದಲ್ಲಿ ಊಹಾಪೋಹಗಳನ್ನು ರವಾನಿಸುತ್ತಿದ್ದಾರೆ. ಅಲ್ಲದೇ, ಈ ವಿಚಾರವಾಗಿ ಹಲವಾರು ರಾಜಕಾರಣಿಗಳು ಕೂಡಾ ಸಂಬಂಧ ಕಲ್ಪಿಸಿ ಆರೋಪ ನಡೆಸುತ್ತಿದ್ದಾರೆ ಎಂದು ದಿಶಾ ಸಾಲ್ಯಾನ್ ತಂದೆ ಸತೀಶ್ ಸಾಲ್ಯಾನ್ ಆರೋಪಿಸಿದ್ದಾರೆ.
ದಿಶಾ ಸಾಲ್ಯಾನ್ ಸಾವಿಗೆ ಸಂಬಂಧಪಟ್ಟಂತೆ ಊಹಾಪೋಹಗಳನ್ನು ರವಾನಿಸುತ್ತಿರುವ ಮೂವರ ವಿರುದ್ದ ಸತೀಶ್ ಸಾಲ್ಯಾನ್ ತಂದೆ ದೂರು ದಾಖಲಿಸಿದ್ದಾರೆ. ಮುಂಬೈ ಪೊಲೀಸರು ದೂರನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ವಿಚಾರವಾಗಿ ಕಾನೂನಿನ ಸಲಹೆ ಪಡೆದುಕೊಳ್ಳುತ್ತಿರುವುದಾಗಿ ವರದಿ ವಿವರಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ಊಹಾಪೋಹಗಳನ್ನು ಹಬ್ಬಿಸುತ್ತಿರುವ ಮೂವರ ವಿರುದ್ದ ಮುಂಬೈನ ಮಾಲ್ವಾನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ ದಿಶಾ ತಂದೆ ಸತೀಶ್ ಸಾಲ್ಯಾನ್ ಹೇಳಿದ್ದಾರೆ. ಮಗಳ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪೋಸ್ಟ್ಗಳಿಂದ ತಮಗಾದ ನೋವಿನ ಬಗ್ಗೆ ಅವರು ದೂರಿನಲ್ಲಿ ತಿಳಿಸಿರುವುದಾಗಿ ಹೇಳಿದ್ದಾರೆ.
ಸತೀಶ್ ಸಾಲ್ಯಾನ್ ಅವರು ನೀಡಿರುವ ದೂರಿನ ಅನ್ವಯ, ಪುನೀತ್ ವಶಿಷ್ಠಾ, ಸಂದೀಪ್ ಮಲಾನಿ ಹಾಗೂ ನಮನ್ ಶರ್ಮಾ ಅವರ ವಿರುದ್ದ ದೂರು ದಾಖಲಿಸಿದ್ದು, ಈ ಮೂವರು ಬೇಕಾಬಿಟ್ಟಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವುದಾಗಿ ಆರೋಪಿಸಿದ್ದಾರೆ.
ಇನ್ನು ಮುಂಬೈ ಪೊಲೀಸ್ ಅಧಿಕಾರಿಗಳು ಸತೀಶ್ ಸಾಲ್ಯಾನ್ ಅವರು ನೀಡಿರುವ ಹೇಳಿಕೆಯನ್ನು ದಾಖಲಿಸಿಕೊಂಡಿದ್ದು, ಮೂವರ ವಿರುದ್ದ ಶೀಘ್ರವೇ ಎಫ್ಐಆರ್ ದಾಖಲಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.