ನವದೆಹಲಿ, ಆ 14 (DaijiworldNews/HR): ಭಾರತೀಯ ಇತಿಹಾಸದಲ್ಲಿ ಕಾಂಗ್ರೆಸ್ ಪಕ್ಷದ ಪ್ರಧಾನಿಗಳನ್ನು ಹೊರತು ಪಡಿಸಿ ದೀರ್ಘಾವಧಿಯಾಗಿ ಸೇವೆ ಸಲ್ಲಿಸಿದ ದೇಶದ ನಾಲ್ಕನೇ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾಜನರಾಗಿದ್ದಾರೆ.
ಈ ಹಿಂದೆ ಬಿಜೆಪಿ ಪಕ್ಷದಿಂದ ಪ್ರಧಾನಿ ಆಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿ 6 ವರ್ಷ 64 ದಿನಗಳ ಕಾಲ ಸೇವೆ ಸಲ್ಲಿಸಿದ್ದರು. ಇದೀಗ ನರೇಂದ್ರ ಮೋದಿ ಅವರು ಎರಡನೇ ಅವಧಿ ಸೇರಿದಂತೆ ಆರು ವರ್ಷ 79 ದಿನಗಳ ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ.
ಇನ್ನು ಈ ಹಿಂದಿನ ಪ್ರಧಾನಿಗಳ ಪೈಕಿ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು 17 ವರ್ಷಗಳ ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ. ನಂತರ ಅವರ ಮಗಳು ಇಂದಿರಾ ಗಾಂಧಿ ಕ್ರಮವಾಗಿ 11 ವರ್ಷಗಳು ಮತ್ತು ಸುಮಾರು ನಾಲ್ಕುವರೆ ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಆ ನಂತರ ಡಾ. ಮನಮೋಹನ್ ಸಿಂಗ್ 5 ವರ್ಷಗಳ ಸತತ ಎರಡು ಅವಧಿಗೆ ಸೇವೆ ಸಲ್ಲಿಸಿದರು.
ನರೇಂದ್ರ ಮೋದಿ ಅವರು ಮೊದಲಿಗೆ 2014 ರ ಮೇ 26 ರಂದು ದೇಶದ 14 ನೇ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಬಳಿಕ 2019 ರ ಮೇ 30 ರಂದು ಪ್ರಧಾನ ಮಂತ್ರಿಯಾಗಿ ತಮ್ಮ ಎರಡನೇ ಅವಧಿಯನ್ನು ಆರಂಭಿಸಿದರು.