ಚಿಕ್ಕಮಗಳೂರು, ಆ 14 (DaijiworldNews/PY): ಶೃಂಗೇರಿಯ ಶಂಕರಾಚಾರ್ಯರ ಪ್ರತಿಮೆಯ ಮೇಲೆ ಎಸ್ಡಿಪಿಐ ಬಾವುಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದೆ.
ಈ ಪ್ರಕರಣದ ತನಿಖೆಗಾಗಿ ಚಿಕ್ಕಮಗಳೂರು ಹಾಗೂ ಕೊಪ್ಪ ಡಿವೈಎಸ್ಪಿ ನೇತೃತ್ವದಲ್ಲಿ 10 ಜನರ ವಿಶೇಷ ಪೊಲೀಸ್ ತಂಡ ರಚನೆ ಮಾಡಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಶೃಂಗೇರಿ ಪೊಲೀಸರು ಈಗಾಗಲೇ ಇಬ್ಬರನ್ನು ಬಂಧಿಸಿದ್ದಾರೆ.
ಶಂಕರಾಚಾರ್ಯರ ಪ್ರತಿಮೆಯ ಮೇಲೆ ಎಸ್ಡಿಪಿಐ ಬಾವುಟ ಎಸೆದ ಕಿಡಿಗೇಡಿಗಳ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಮಠದ ಭಕ್ತರು ಸೇರಿದಂತೆ ಶಾಸಕರು ಹಾಗೂ ಮಾಜಿ ಶಾಸಕರು ಒತ್ತಾಯಿಸುತ್ತಿದ್ದಂತೆ ಪೊಲೀಸರು ವಿಶೇಷ ತಂಡ ರಚಿಸಿ ಕಾರ್ಯ ಪ್ರವೃತ್ತರಾಗಿದ್ದಾರೆ.
ಈ ವಿಚಾರವಾಗಿ ಪ್ರತಿಕ್ರಿಯಿಸಿದ ಶೃಂಗೇರಿ ಶಾಸಕ ರಾಜೇಗೌಡ, ಘಟನೆಯ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು. ಆರೋಪಿ ಯಾರೇ ಆಗಿದ್ದರೂ ಕೂಡಾ ಸೂಕ್ತವಾದ ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆದರೆ ಮಾತ್ರವೇ ಇಂತಹ ಪ್ರಕರಣಗಳು ನಡೆಯುವುದು ತಪ್ಪುತ್ತವೆ ಎಂದು ಆಗ್ರಹಿಸಿದ್ದಾರೆ.