ಬೆಂಗಳೂರು, ಆ 14 (DaijiworldNews/HR): ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ರಾತ್ರೋರಾತ್ರಿ ನಡೆದ ಗಲಭೆಗೆ ಕಾರಣವಾದ ಫೇಸ್ ಬುಕ್ ನಲ್ಲಿ ಧಾರ್ಮಿಕ ನಿಂದನೆಯ ಪೋಸ್ಟ್ ಹಾಕಿದ್ದು ನಾನೇ ಎಂದು ನವೀನ್ ವಿಚಾರಣೆಯ ವೇಳೆ ತಪ್ಪು ಒಪ್ಪಿಕೊಂಡಿದ್ದಾನೆ.
ಪುಲಿಕೇಶಿ ನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಅಕ್ಕನ ಮಗನಾದ ನವೀನ್ ನನ್ನು ಪೊಲೀಸರು ತೀವ್ರವಾಗಿ ವಿಚಾರಣೆ ನಡೆಸಿದ್ದು, ತಾನು ಫೇಸ್ ಬುಕ್ ಖಾತೆಯಲ್ಲಿ ಅವಹೇಳನಕಾರಿ ಕಮೆಂಟ್ ಜತೆಗೆ ವಿವಾದಾತ್ಮಕ ಪೋಸ್ಟ್ ಕೂಡ ಶೇರ್ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ನಾನು 7ಗಂಟೆ ಸುಮಾರಿಗೆ ಪೋಸ್ಟ್ ಮಾಡಿ 8 ಗಂಟೆಗೆ ಡಿಲೀಟ್ ಮಾಡಿದ್ದೆ. ಆದರೆ, ಆ ಒಂದು ಪೋಸ್ಟ್ ನಿಂದಾಗಿ ಇಂತಹ ಘಟನೆಗಳು ನಡೆಯುತ್ತವೆ ಎಂದು ತಾನು ಊಹಿಸಿರಲಿಲ್ಲ ಎಂದು ನವೀನ್ ಪೊಲೀಸರಿಗೆ ತಿಳಿಸಿದ್ದಾನೆ.
ಆದರೆ, ಇದುವರೆಗೂ ನವೀನ್ ಮೊಬೈಲ್ ಮಾತ್ರ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.
ವಿಚಾರಣೆಯ ಮೊದಲಿಗೆ ನನ್ನ ಮೊಬೈಲ್ ಕಳೆದು ಹೋಗಿದ್ದು, ನನ್ನ ಫೇಸ್ ಬುಕ್ ಅನ್ನು ಹ್ಯಾಕ್ ಮಾಡಲಾಗಿದ್ದು, ನಾನು ಫೇಸ್ ಬುಕ್ ನಲ್ಲಿ ಯಾವುದೇ ಪೋಸ್ಟ್ ಮಾಡಿಲ್ಲ ಎಂದು ವಾದ ಮಾಡುತ್ತಿದ್ದ ನವೀನ್, ಇದೀಗ ತಪ್ಪು ಒಪ್ಪಿಕೊಳ್ಳುವ ಮೂಲಕ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ.