ಬೆಂಗಳೂರು, ಆ 14 (DaijiworldNews/HR): ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಎರಡರಿಂದ ಮೂರು ವರ್ಷದೊಳಗೆ ಪಕ್ಷದ ಕಾರ್ಯಾಲಯ ಪ್ರಾರಂಭಿಸುವ ಯೋಜನೆ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಈ ಬಗ್ಗೆ ಬಿಜೆಪಿ ಜಿಲ್ಲಾ ಕಾರ್ಯಾಲಯ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪಕ್ಷದ ಕಾರ್ಯಾಲಯಗಳನ್ನು ಪ್ರಾರಂಭಿಸಲು ಭೂಮಿ ಖರೀದಿಸುವ ಪ್ರಕ್ರಿಯೆ ಶುರುವಾಗಿದ್ದು, ಕೋಲಾರ, ಬಾಗಲಕೋಟೆ, ಬಳ್ಳಾರಿ, ವಿಜಯಪುರ, ರಾಯಚೂರು, ಬೀದರ್, ತಿಪಟೂರು ಮತ್ತು ಚಾಮರಾಜನಗರದಲ್ಲಿ ಕಾರ್ಯಾಲಯ ಆರಂಭವಾಗುತ್ತಿವೆ ಎಂದರು. ಮುಂದಿನ ದಿನಗಳಲ್ಲಿ ಹಾವೇರಿ, ರಾಮನಗರ, ಉತ್ತರ ಕನ್ನಡ ಸೇರಿದಂತೆ ಒಟ್ಟು 11 ಕಡೆ ಕಾರ್ಯಾಲಯಗಳನ್ನು ಪ್ರಾರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.
ಬಿಜೆಪಿಯು ಗ್ರಾಮ ಪಂಚಾಯಿತಿಯಿಂದ ಹಿಡಿದು ಲೋಕಸಭೆ ಚುನಾವಣೆಯವರೆಗೂ ಅಧಿಕಾರ ಹಿಡಿಯಬೇಕು. ಇದಕ್ಕಾಗಿ ಬೇಕಾದ ಕೆಲಸಗಳನ್ನು ಈಗಿನಿಂದಲೇ ಮಾಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಪಕ್ಷದ ಕಾರ್ಯಕರ್ತರಿಗೆ ತಿಳಿಸಿದರು.
ಈ ಬಗ್ಗೆ ದೆಹಲಿಯಿಂದಲೇ ವರ್ಚುವಲ್ ಮೂಲಕ ಬಿಜೆಪಿ ಜಿಲ್ಲಾ ಕಾರ್ಯಾಲಯ ಭವನ ನಿರ್ಮಾಣ ಶಿಲಾನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ 224 ಕ್ಷೇತ್ರಗಳಲ್ಲೂ ಬಿಜೆಪಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಬೇಕು. ಅದಕ್ಕಾಗಿ ಕಾರ್ಯಕರ್ತರು ಶ್ರಮ ಪಡಬೇಕು. ಇನ್ನು ರಾಜ್ಯದಲ್ಲಿ ಯಾವ ಯಾವ ಕ್ಷೇತ್ರಗಳಲ್ಲಿ ಪಕ್ಷ ಸೋಲು ಕಂಡಿದೆ ಅಂತಹ ಕ್ಷೇತ್ರಗಳಲ್ಲಿ ಹೆಚ್ಚಾಗಿ ಬಿಜೆಪಿ ಸಂಘಟನೆಯನ್ನು ಚುರುಕುಗೊಳಿಸಬೇಕು ಎಂದು ಸಲಹೆ ನೀಡಿದರು.