ನವದೆಹಲಿ, ಆ 15 (DaijiworldNews/PY): ಭಾರತವು ಆತ್ಮ ನಿರ್ಭರ ಭಾರತದ ಕನಸನ್ನುಸಾಕಾರಗೊಳಿಸುತ್ತದೆ ಎನ್ನುವ ವಿಶ್ವಾಸ ನನಗಿದೆ. ಭಾರತೀಯರ ಸಾಮರ್ಥ್ಯದ ಬಗ್ಗೆ ನನಗೆ ವಿಶ್ವಾಸವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ರಾಜ್ಘಾಟ್ಗೆ ತೆರಳಿದ ಪ್ರಧಾನಿ ಮೋದಿ ಅವರು ಗಾಂಧೀಜಿ ಸಮಾಧಿಗೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು. ಬಳಿಕ ಕೆಂಪುಕೋಟೆ ತಲುಪಿದ ಪ್ರಧಾನಿ ಅವರನ್ನು ರಕ್ಷಣ ಸಚಿವ ರಾಜನಾಥ್ ಸಿಂಗ್ ಸ್ವಾಗತಿಸಿದರು. ನಂತರ ಕೆಂಪುಕೋಟೆಯಲ್ಲಿ ಧ್ವಜ ವಂದನೆ ಸ್ವೀಕರಿಸಿದ ಅವರು, ಧ್ವಜಾರೋಹಣ ನೆರವೇರಿಸಿ ದೇಶವನ್ನುದ್ದೇಶಿ ಮಾತನಾಡಿದರು.
ಇಂದು 74ನೇ ಸ್ವಾತಂತ್ರ್ಯೋತ್ಸವ ವೇಳೆ ರಾಜಧಾನಿ ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ಕೊರೊನಾವು ದೇಶದ ಉಜ್ವಲ ಭವಿಷ್ಯಕ್ಕೆ ಅಡ್ಡಿಯಾಗಿದೆ. ಕೊರೊನಾ ನಿಯಂತ್ರಣ ಮಾಡುವಲ್ಲಿ ಕೊರೊನಾ ಯೋಧರ ಹೋರಾಟ ಶ್ಲಾಘನೀಯವಾಗಿದೆ ಎಂದು ಹೇಳಿದರು.
ಈ ದಿನ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪು ಮಾಡುವ ದಿನವಾಗಿದೆ. ನಮ್ಮ ಭದ್ರತೆ ಮಾಡುತ್ತಿರು ಸೇನೆ ಸೇರಿದಂತೆ ಅರೆಸೈನಿಕ, ಪೊಲೀಸರು, ಭದ್ರತಾ ಸಿಬ್ಬಂದಿಗಳಿಗೆ ನನ್ನ ಕೃತಜ್ಞತೆಗಳು ಎಂದರು.
ನನಗೆ ದೇಶದ ಮಹಿಳೆಯರು ಮಕ್ಕಳ ಮೇಲೆ ವಿಶ್ವಾಸವಿದೆ. ಆತ್ಮ ನಿರ್ಭರ ಭಾರತವನ್ನು ನಾವು ಸಾಧಿಸುತ್ತೇವೆ ಎನ್ನುವ ನಂಬಿಕೆಯಿದೆ. ಯುವ ಶಕ್ತಿಯಿಂದ ತುಂಬಿರುವಂತ ದೇಶ ಭಾರತ. ಆತ್ಮ ನಿರ್ಭರ ಭಾರತವು ದೇಶದ 130 ಕೋಟಿ ಜನರ ಮಂತ್ರವಾಗಿದೆ. ಭಾರತವು ಆತ್ಮ ನಿರ್ಭರ ಭಾರತವನ್ನು ಸಾಕಾರಗೊಳಿಸುತ್ತದೆ ಎನ್ನುವ ವಿಶ್ವಾಸ ನನಗಿದೆ ಎಂದು ತಿಳಿಸಿದರು.
ಇಡೀ ಜಗತ್ತಿನ ಕಲ್ಯಾಣಕ್ಕಾಗಿ ಭಾರತವು ಆತ್ಮ ನಿರ್ಭರವಾಗಬೇಕಿದೆ. ಇದು ಕೃಷಿ ಕ್ಷೇತ್ರದಲ್ಲಿ ಕೂಡಾ ಸಾಧಿಸಿ ತೋರಿಸಿದೆ. ನಮ್ಮ ರೈತರು ದೇಶದ ಹೊಟ್ಟೆ ತುಂಬಿಸುತ್ತಿದ್ದಾರೆ. ಜಗತ್ತಿಗೆ ರೈತರು ನೀಡಿದ ಕೊಡುಗೆ ಅಪಾರವಾಗಿದೆ. ಈ ಸಂದರ್ಭ ವೋಕಲ್ ಫಾರ್ ಲೋಕಲ್ ಮಂತ್ರ ಜಪಿಸಿದ ಪ್ರಧಾನ ಮೋದಿ, ಸ್ಥಳೀಯ ಉತ್ಪನ್ನಗಳಿಗೆ ಪ್ರಾಶಸ್ತ್ಯ ನೀಡಲು ತಿಳಿಸಿದರು. ಇದರಿಂದ ಸ್ಥಳೀಯರಿಗೆ ಬೆಂಬಲ ದೊರಕುತ್ತದೆ ಎಂದು ಹೇಳಿದರು.
ದೇಶದಲ್ಲಿ ಈಗಾಗಲೇ ಸಾಕಷ್ಟು ಬದಲಾವಣೆಗಳು ಆಗುತ್ತಿವೆ. ಅಲ್ಲದೇ ಅನೇಕ ಯೋಜನೆಗಳು ಜಾರಿಗೆ ಬರುತ್ತಿವೆ. ಭಾರತವು ವಿದೇಶಿ ಬಂಡವಾಳದಲ್ಲೂ ಕೂಡಾ ಮುಂಚೂಣಿಯಲ್ಲಿದೆ. ಇನ್ನು ಯುವಕರಿಗೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಅವಕಾಶ ದೊರಕುತ್ತದೆ ಎಂದುಕೊಂಡಿರಲಿಲ್ಲ ಎಂದರು.