ನವದೆಹಲಿ, ಆ 15(DaijiworldNews/HR): ಕೋವಿಡ್ 19ನಿಂದ ಭಯಪಡುವ ಅಗತ್ಯವಿಲ್ಲ, ಕರೊನಾಗೆ ಭಾರತದಲ್ಲೇ ಲಸಿಕೆ ಸಿದ್ಧವಾಗುತ್ತಿದ್ದು ಶೀಘ್ರದಲ್ಲೇ ಔಷಧಿ ಜನರ ಕೈ ಸೇರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಧೈರ್ಯ ತುಂಬಿದರು.
ಇಂದು 74ನೇ ಸ್ವಾತಂತ್ರ್ಯೋತ್ಸವ ವೇಳೆ ರಾಜಧಾನಿ ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ಕೊರೊನಾವು ಇಡೀ ದೇಶಕ್ಕೆ ವಿಶೇಷ ಪರಿಸ್ಥಿತಿಯನ್ನು ತಂದಿದ್ದು ದೇಶದ ಉಜ್ವಲ ಭವಿಷ್ಯಕ್ಕೆ ಅಡ್ಡಿಯಾಗಿದೆ. ಕೊರೊನಾ ನಿಯಂತ್ರಣಕ್ಕಾಗಿ ಸುದೀರ್ಘ ಸಮಯದಿಂದ ಸೇವೆ ಸಲ್ಲಿಸುತ್ತಿರುವ ಯೋಧರ ಹೋರಾಟ ಶ್ಲಾಘನೀಯವಾಗಿದೆ ಎಂದು ಹೇಳಿದರು.
ಇನ್ನು ಕೊರೊನಾಗೆ ಯಾವುದೇ ಭಯಪಡುವ ಅಗತ್ಯವಿಲ್ಲ, ಅದಕ್ಕೆ ಭಾರತದಲ್ಲೇ ಲಸಿಕೆ ಸಿದ್ಧವಾಗುತ್ತಿದೆ. ಒಂದಲ್ಲ, ಎರಡಲ್ಲ ಮೂರು ಲಸಿಕೆಗಳು ತಯಾರುತ್ತಿದ್ದು, ಲ್ಯಾಬ್ಗಳಲ್ಲಿ ಸಂಶೋಧನೆ ನಡೆಯುತ್ತಿದೆ. ಶೀಘ್ರದಲ್ಲೇ ಜನರ ಕೈಗೆ ಕರೊನಾ ಔಷಧಿ ಸಿಗಲಿದೆ ಎಂದು ಭರವಸೆ ನೀಡಿದ್ದಾರೆ.
ಕೊರೊನಾ ವಿರುದ್ಧವೂ ಭಾರತ ತನ್ನ ಸಾಮೂಹಿಕ ಶಕ್ತಿಯನ್ನು ತೋರಿಸಿದ್ದು, ಭಾರತದ ಪ್ರತಿಯೊಬ್ಬರಿಗೂ ಆತ್ಮನಿರ್ಭರ ಮಂತ್ರವಾಗಿದೆ. ಇನ್ನೊಂದೆಡೆ ಕೊರೊನಾದ ನಡುವೆ ದೇಶವು ಅನೇಕ ಪ್ರಾಕೃತಿಕ ವಿಕೋಪಗಳನ್ನು ಎದುರಿಸುವಂತಾಗಿದೆ. ಇನ್ನು ದೇಶದ 130 ಕೋಟಿ ಜನರ ಸಂಕಲ್ಪದಿಂದಾಗಿ ಕೊರೊನಾವನ್ನು ಜಯಸಿದ್ದೇವೆ ಎಂದರು.
ಕೊರೊನಾ ಸಂದರ್ಭದಲ್ಲೂ ಆತ್ಮನಿರ್ಭರ ಸಂಕಲ್ಪ ಕೈಗೊಳ್ಳಲಾಗಿದೆ. ಭಾರತ ಆತ್ಮನಿರ್ಭರ ಆಗಲೇಬೇಕಿದೆ. ಭಾರತ ಒಂದು ಬಾರಿ ನಿರ್ಧಾರ ಕೈಗೊಂಡರೆ, ಸಾಧಿಸಿಯೇ ತೀರುತ್ತದೆ. ಭಾರತವು ಆತ್ಮ ನಿರ್ಭರ ಭಾರತದ ಕನಸನ್ನುಸಾಕಾರಗೊಳಿಸುತ್ತದೆ ಎನ್ನುವ ವಿಶ್ವಾಸ ನನಗಿದೆ ಎಂದು ಹೇಳಿದರು.