ಬೆಂಗಳೂರು, ಆ 15(DaijiworldNews/HR): ಮಂಗಳವಾರ ರಾತ್ರಿ ಕೆ ಜಿ ಹಳ್ಳಿ ಡಿಜೆ ಹಳ್ಳಿಯಲ್ಲಿ ನಡೆದ ಗಲಭೆಯಲ್ಲಿ ಬೆಂಕಿ ಹಚ್ಚಿ ದಾಂಧಲೆ ಮಾಡಿ ಪರಾರಿಯಾಗಿದ್ದ ಮತ್ತಷ್ಟು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಡಿಜೆ ಹಳ್ಳಿಯಲ್ಲಿ 34 ಆರೋಪಿಗಳನ್ನು ಮತ್ತು ಕೆಜಿ ಹಳ್ಳಿಯಲ್ಲಿ 50 ಆರೋಪಿಗಳು ಸೇರಿ ಒಟ್ಟು 84 ಆರೋಪಿಗಳನ್ನು ಬಂಧಿಸಿದ್ದಾರೆ.
ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಜೆ ಹಳ್ಳಿ ಪೊಲಿಸರಿಂದ ನಡೆದ ರಾತ್ರಿ ಕಾರ್ಯಚರಣೆಯಲ್ಲಿ ಏರಿಯಾದ ಮೂಲೆ ಮೂಲೆಗಳಲ್ಲಿದ್ದ ಆರೋಪಿಗಳನ್ನು ಹುಡುಕಿ ಅರೆಸ್ಟ್ ಮಾಡಲಾಗಿದ್ದು, ಗಲಭೆಗೆ ಸಂಬಂಧಿಸಿದಂತೆ ಇದುವರೆಗೂ 290 ಆರೋಪಿಗಳ ಬಂಧನವಾಗಿದೆ.
ಪೊಲೀಸರು ರಾತ್ರಿ 12 ಗಂಟೆಯಿಂದ ಬೆಳಗಿನ ಜಾವದವರೆಗೆ ಕಾರ್ಯಚರಣೆ ನಡೆಸಿದ್ದು, ಎಸಿಪಿ ರವಿಪ್ರಸಾದ್ ನೇತೃತ್ವದಲ್ಲಿ ಆರೋಪಿಗಳನ್ನು ಅರೆಸ್ಟ್ ಮಾಡಲಾಯಿತು.
ಗಲಭೆ ವಿಡಿಯೋಗಳ ಪರಿಶೀಲನೆ ನಡೆಸಿ ಆರೋಪಿಗಳನ್ನು ಬಂಧಿಸಿದ ಡಿಜೆ ಹಳ್ಳಿ ಪೊಲೀಸರು ಬಂಧಿತ ಆರೋಪಿಗಳಿಗೆ ಗಲಭೆ ವಿಡಿಯೋ ತೊರಿಸಿ ಮತ್ತೆ ಕೆಲವು ಆರೋಪಿಗಳ ಪತ್ತೆ ಹಚ್ಚಿದ್ದಾರೆ.
ಇನ್ನು ಪೊಲೀಸರಿಂದ ಕಣ್ತಪ್ಪಿಸಲು ಗಲಭೆ ದಿನ ವಾಟ್ಸಪ್ ಗ್ರೂಪ್ ನಲ್ಲಿ ರವಾನೆಯಾಗಿದ್ದ ಸಂದೇಶಗಳನ್ನು ಡಿಲಿಟ್ ಮಾಡಿದ್ದ ಆರೋಪಿಗಳ ಮೊಬೈಲ್ ರಿಕವರಿ ಮಾಡಲು ಪೊಲಿಸರು ಮುಂದಾಗಿದ್ದು ಮೊಬೈಲ್ ಗಳನ್ನು ಟೆಕ್ನಿಕಲ್ ಟೀಂ ಗೆ ರವಾನಿಸಿದ್ದಾರೆ.