ಬೆಂಗಳೂರು, ಆ 15 (DaijiworldNews/PY): ಬೆಂಗಳೂರು ಗಲಭೆ ಪ್ರಕರಣ ಹಿನ್ನೆಲೆ ಪ್ರಕರಣದ ಪ್ರಮುಖ ಸಾಕ್ಷ್ಯವಾದ ಆರೋಪಿ ನವೀನ್ನ ಮೊಬೈಲ್ ಫೋನ್ ಕೊನೆಗೂ ಪತ್ತೆಯಾಗಿದೆ.
ಬೆಳಗ್ಗೆ 7.30ರ ಸುಮಾರಿಗೆ ಬೆಂಗಳೂರಿನ ಕಾವಲ್ ಭೈರಸಂದ್ರದಲ್ಲಿರುವ ಆರೋಪಿ ನವೀನ್ನ ಮನೆಯನ್ನು ಮಹಜರು ಮಾಡುತ್ತಿದ್ದ ಸಂದರ್ಭ ಮೊಬೈಲ್ ಫೋನ್ ಪತ್ತೆಯಾಗಿದೆ.
ಆರೋಪಿ ನವೀನ್ ತನ್ನ ಮೊಬೈಲ್ನಿಂದಲೇ ಫೇಸ್ಬುಕ್ನಲ್ಲಿ ವಿವಾದಾತ್ಮಕವಾದ ಪೋಸ್ಟ್ ಮಾಡಿದ್ದ. ಗಲಭೆಯ ಸಂದರ್ಭ ಪರಾರಿಯಾಗುವ ವೇಳೆ ಮೊಬೈಲ್ ಫೋನ್ ಬಿದ್ದಿತ್ತು. ವಿಚಾರಣೆ ವೇಳೆ ಆತ ನನ್ನ ಮೊಬೈಲ್ ಫೋನ್ ಕಳೆದು ಹೋಗಿದೆ ಎಂದಿದ್ದ. ಈ ಬಗ್ಗೆ ಅನುಮಾನಗೊಂಡ ಪೊಲೀಸರು ಆರೋಪಿಯನ್ನು ಕರೆತಂದು ಸ್ಥಳ ಮಹಜರು ಮಾಡಿದ್ದು, ಮನೆಯ ಸುತ್ತ ಪರಿಶೀಲನೆ ನಡೆಸುತ್ತಿದ್ದ ಸಂದರ್ಭ ಮೊಬೈಲ್ ಫೋನ್ ಪತ್ತೆಯಾಗಿದೆ.
ನವೀನ್ನನ್ನು ಪೊಲೀಸರು ತೀವ್ರವಾಗಿ ವಿಚಾರಣೆ ನಡೆಸಿದ್ದ ವೇಳೆ, ತಾನು ಫೇಸ್ ಬುಕ್ ಖಾತೆಯಲ್ಲಿ ಅವಹೇಳನಕಾರಿ ಕಮೆಂಟ್ ಹಾಕಿದ್ದು ಅದರೊಂದಿಗೆ ವಿವಾದಾತ್ಮಕ ಪೋಸ್ಟ್ ಕೂಡ ಶೇರ್ ಮಾಡಿರುವುದಾಗಿ ಸತ್ಯ ಒಪ್ಪಿಕೊಂಡಿದ್ದ.
ನಾನು 7ಗಂಟೆ ಸುಮಾರಿಗೆ ಪೋಸ್ಟ್ ಮಾಡಿ 8 ಗಂಟೆಗೆ ಡಿಲೀಟ್ ಮಾಡಿದ್ದೆ. ಆದರೆ, ಆ ಪೋಸ್ಟ್ನಿಂದಾಗಿ ಇಂತಹ ಘಟನೆ ನಡೆಯುತ್ತದೆ ಎಂದು ತಾನು ಊಹೆ ಮಾಡಿರಲಿಲ್ಲ ಎಂದು ನವೀನ್ ಪೊಲೀಸರಿಗೆ ತಿಳಿಸಿದ್ದ.