ನವದೆಹಲಿ, ಆ. 15 (DaijiworldNews/MB) : ''ನಮ್ಮ ಭಾರತದ ಭೂಮಿಯ ಮೇಲೆ ಅತಿಕ್ರಮಣ ಮಾಡಿರುವ ಚೀನಾದ ಹೆಸರು ಉಲ್ಲೇಖಿಸಲು ಅಧಿಕಾರ ನಡೆಸುವವರು ಯಾಕಾಗಿ ಭಯಪಡುತ್ತಾರೆ'' ಎಂದು ಶನಿವಾರ ಕಾಂಗ್ರೆಸ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.
ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ಸ್ವಾತಂತ್ಯ್ರೋವದ ಭಾಷಣದ ಬಳಿಕ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲ ಮಾತನಾಡಿ, ''ಈ ಸ್ವಾತಂತ್ಯ್ರೋವದ ಸಂದರ್ಭದಲ್ಲಿ, ದೇಶದ ರಕ್ಷಣೆಗೆ ಹಾಗೂ ಚೀನಾವನ್ನು ಸದೆಬಡಿಯಲು ಕೇಂದ್ರ ಸರ್ಕಾರ ಏನು ಮಾಡುತ್ತಿದೆ ಎಂದು ಪ್ರತಿಯೊಬ್ಬ ಭಾರತೀಯರು ಪ್ರಶ್ನಿಸಬೇಕಾಗಿದೆ. ಹಾಗೆಯೇ ಈ ಸಂದರ್ಭದಲ್ಲಿ ಸರ್ಕಾರಕ್ಕೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇದೆಯೇ? ಜನರ ಆದೇಶದ ಮೇಲೆ ಸರ್ಕಾರಕ್ಕೆ ವಿಶ್ವಾಸವಿದೆಯೇ, ದೇಶದಲ್ಲಿ ಮುಕ್ತವಾಗಿ ಮಾತನಾಡುವ ಸ್ವಾತಂತ್ಯ್ರವಿದೆಯೇ ಎಂದು ಪ್ರಶ್ನಿಸಬೇಕಾಗಿದೆ'' ಎಂದು ಹೇಳಿದ್ದಾರೆ.
''ಪ್ರಧಾನಿ ನರೇಂದ್ರ ಮೋದಿಯವರು ಭಾರತೀಯ ಸೈನಿಕರು ದೇಶದ ಸಾರ್ವಭೌಮತ್ವದ ಮೇಲೆ ಕಣ್ಣಿಟ್ಟವರಿಗೆ ಗಡಿ ನಿಯಂತ್ರಣಾ ರೇಖೆಯಿಂದ ಹಿಡಿದು, ವಾಸ್ತವ ಗಡಿ ನಿಯಂತ್ರಣಾ ರೇಖೆಯ ವರೆಗೆ ತಕ್ಕ ಉತ್ತರ ನೀಡಿದ್ದಾರೆ ಎಂದಿದ್ದಾರೆ. ಆದರೆ ಚೀನಾದ ಹೆಸರನ್ನು ಉಲ್ಲೇಖ ಮಾಡಿಲ್ಲ'' ಎಂದು ವ್ಯಂಗ್ಯವಾಡಿದರು.
ಹಾಗೆಯೇ ''ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತ ಮತ್ತು ಪ್ರತಿಯೊಬ್ಬ ಭಾರತೀಯನೂ ಕೂಡಾ ಭಾರತೀಯ ಸಶಸ್ತ್ರ ಪಡೆಗಳ ಬಗ್ಗೆ ಹೆಮ್ಮೆ ಪಡುತ್ತಾನೆ. ಇಡೀ ದೇಶವೇ ದೇಶದ ಸಾರ್ವಭೌಮತ್ವದ ರಕ್ಷಣೆಗೆ ಒಗ್ಗಟ್ಟಾಗಿದೆ'' ಎಂದು ಹೇಳಿದರು.