ರಾಮನಗರ, ಆ. 15 (DaijiworldNews/MB) : ''ಕೇಂದ್ರ ಸರ್ಕಾರ ರೂಪಿಸಿರುವ ಹೊಸ ಶಿಕ್ಷಣ ನೀತಿಯನ್ನು ಮೊದಲು ಕರ್ನಾಟಕದಲ್ಲೇ ಜಾರಿ ಮಾಡಲಾಗುತ್ತದೆ'' ಎಂದು ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ್ ಅವರು ಹೇಳಿದ್ದಾರೆ.
ಶನಿವಾರ ರಾಮನಗರ ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿದ್ದ 74ನೇ ಸ್ವಾತಂತ್ಯ್ರೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣದ ಬಳಿಕ ಮಾತನಾಡಿದ ಅವರು, ''ಕೇಂದ್ರ ಸರ್ಕಾರ ರೂಪಿಸಿರುವ ಹೊಸ ಶಿಕ್ಷಣ ನೀತಿಯನ್ನು ಮೊದಲು ಅಂಗೀಕಾರ ಮಾಡಿದ ರಾಜ್ಯ ಕರ್ನಾಟಕವಾಗಿದೆ. ಮೊದಲು ಕರ್ನಾಟಕದಲ್ಲೇ ಜಾರಿ ಮಾಡಲಾಗುತ್ತದೆ. ಅದಕ್ಕಾಗಿ ಎಲ್ಲಾ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಶೈಕ್ಷಣಿಕವಾಗಿ ಮುಂಚೂಣಿಯಲ್ಲಿರುವ ಕರ್ನಾಟಕ ರಾಜ್ಯವನ್ನು ಈ ಹೊಸ ಶಿಕ್ಷಣ ನೀತಿ ಇನ್ನಷ್ಟು ಸದೃಢಗೊಳಿಸಲಿದೆ'' ಎಂದು ಹೇಳಿದ್ದಾರೆ.
ಇನ್ನು ಈ ಸಂದರ್ಭದಲ್ಲೇ ಎಸ್ಡಿಪಿಐ ಹಾಗೂ ಪಿಎಫ್ಐ ಬೆಳೆಯಲು ಕಾಂಗ್ರೆಸ್ ಕಾರಣ ಎಂದು ಆರೋಪ ಮಾಡಿರುವ ಅವರು, ''ಕಾಂಗ್ರೆಸ್ನಿಂದ ಹತಾಶೆಗೊಂಡ ಕಾಂಗ್ರೆಸ್ ಕಾರ್ಯಕರ್ತ ಫೇಸ್ಬುಕ್ನಲ್ಲಿ ಈ ರೀತಿಯಲ್ಲಿ ಬರೆದು ಅನಾಹುತ ಮಾಡಿಕೊಂಡಿದ್ದಾನೆ. ತಪ್ಪು ಮಾಡಿರುವ ಕಾಂಗ್ರೆಸ್ ಈಗ ಎಲ್ಲಾ ಕಡೆ ಬೊಟ್ಟು ಮಾಡಿ ತೋರಿಸುತ್ತಿದೆ. ನಿಜವಾಗಿ ಎಸ್ಡಿಪಿಐ, ಪಿಎಫ್ಐ ಬೆಳೆಯಲು ಕಾಂಗ್ರೆಸ್ ಕಾರಣ. ಅವರ ತಪ್ಪನ್ನು ಮೊದಲು ಸರಿಪಡಿಸಲಿ'' ಎಂದು ವಾಗ್ದಾಳಿ ನಡೆಸಿದ್ದಾರೆ.
ಹಾಗೆಯೇ ''ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಹೇಳುವುದು ಸುಳ್ಳು . ಈ ಪ್ರಕರಣಕ್ಕೆ ಸಂಬಂಧಿಸಿ ಪಿಎಫ್ಐ ವಿರುದ್ದದ 175 ಕ್ಕೂ ಅಧಿಕ ಪ್ರಕರಣಗಳನ್ನು ರದ್ದು ಮಾಡಿರುವ ಸಿದ್ದರಾಮಯ್ಯನವರು ಹೇಳಬೇಕು ಎಂದು ಲೇವಡಿ ಮಾಡಿರುವ ಅವರು, ನಿಜವಾಗಿಯೂ ಕಾಂಗ್ರೆಸ್ ದೊಡ್ಡ ಕೋಮುವಾದಿಗಳು. ಕಾಂಗ್ರೆಸ್ಗೆ ಸ್ಪಷ್ಟವಾದ ನಿಲುವೇ ಇಲ್ಲ'' ಎಂದು ದೂರಿದರು.