ಹಾವೇರಿ, ಆ 15 (Daijiworld News/MSP): ಕೋಮು ಸಾಮರಸ್ಯ ಸೇರಿದಂತೆ ಸಾಮಾಜಿಕ ಸ್ವಾಸ್ಥ್ಯ ಕದಡುವ ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರವಾಗುವ ವಿಷಯಗಳ ಪೂರ್ವ ಪರಿಶೀಲನೆ ಕುರಿತಂತೆ ಚರ್ಚಿಸಲು ಎಲ್ಲ ಜಾಲತಾಣಗಳ ಮುಖ್ಯಸ್ಥರನ್ನು ಕರೆದು ಚರ್ಚಿಸಲು ನಿರ್ಧರಿಸಲಾಗಿದೆ ಎಂದು ರಾಜ್ಯದ ಗೃಹ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿ ಅವರು ಸೂಚನೆ ನೀಡಿದರು.
ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ 74ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಫೇಸಬುಕ್, ವಾಟ್ಸಾಪ್, ಟ್ವಿಟರ್, ಇನ್ಸಟ್ರಾಗ್ರಾಂ ಸೇರಿದಂತೆ ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ವಿಷಯಗಳನ್ನು ಪೋಸ್ಟ್ ಮಾಡುವ ಮುನ್ನ ಆಯಾ ಕಂಪನಿಗಳು ಪರಿಶೀಲಿಸಿ ಈ ಹಂತದಲ್ಲೇ ಕಡಿವಾಣ ಹಾಕುವ ಕುರಿತಂತೆ ಕಂಪನಿಯ ಮುಖ್ಯಸ್ಥರೊಂದಿಗೆ ಚರ್ಚಿಸಿ ನಿರ್ಧರಿಲಾಗುವುದು. ಈ ಕುರಿತಂತೆ ಶೀಘ್ರವೇ ಬೆಂಗಳೂರಿನಲ್ಲಿ ಸಭೆ ನಡೆಸಲಾಗುವುದು ಎಂದು ತಿಳಿಸಿದರು.
ನೆರೆಯಂತಹ ವಿಪತ್ತು ನಿರ್ವಹಣೆಗೆ ರಾಜ್ಯದ ಬೇಡಿಕೆಯಂತೆ ನಾಲ್ಕು ಎನ್.ಡಿ.ಆರ್.ಎಫ್. ತಂಡಗಳ ಜೊತೆಗೆ ಹೆಚ್ಚುವರು ನಾಲ್ಕು ತಂಡ ಒಳಗೊಂಡಂತೆ ಎಂಟು ತಂಡಗಳನ್ನು ಕಳುಹಿಸಲು ಅನುಮತಿ ನೀಡಿದ್ದಾರೆ ಎಂದು ಅವರು ತಿಳಿಸಿದರು ಹಾಗೂ ಭೂ ಕುಸಿತ ಸೇರಿದಂತೆ ತೀವ್ರ ತರದ ವಿಪತ್ತು ಸಂದರ್ಭದಲ್ಲಿ ಕ್ಷಿಪ್ರ ಕಾರ್ಯಾಚರಣೆ ಹಾಗೂ ಸಂಪರ್ಕಕ್ಕೆ ಅನುಕೂಲವಾಗುವಂತೆ ಅಂತರ ರಾಜ್ಯ ವಿಪತ್ತು ನಿರ್ವಹಣೆಯ ಘಟಕಗಳ ಸ್ಥಾಪನೆಗೆ ಕೇಂದ್ರಕ್ಕೆ ಕೋರಲಾಗಿದ್ದು, ಸಂಬಂಧಪಟ್ಟ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಗಿದೆ. ಇದರಿಂದ ನೆರೆ ಇತರ ತುರ್ತು ಸಂದರ್ಭಗಳಲ್ಲಿ ಅಕ್ಕಪಕ್ಕದ ರಾಜ್ಯಗಳ ಸಮನ್ವಯದಿಂದ ವಿಪತ್ತು ನಿರ್ವಹಣೆಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.
ಕರೋನಾ ನಿಯಂತ್ರಣಕ್ಕಾಗಿ ಆರ್.ಟಿ.ಪಿ.ಆರ್. ಹಾಗೂ ರ್ಯಾಪಿಡ್ ಆಂಟಿಜನ್ ಟೆಸ್ಟ್ಗಳನ್ನು ಹೆಚ್ಚಳಮಾಡಲು ಸೂಚನೆ ನೀಡಲಾಗಿದೆ. ಹೈ ಫ್ಲೋ ಆಕ್ಸಿಜನ್ ಬೆಡ್ಗಳ ವ್ಯವಸ್ಥೆ ಹೆಚ್ಚಳಕ್ಕೆ ಕ್ರಮವಹಿಸಲಾಗಿದೆ. ಐ.ಸಿ.ಯು ವಾರ್ಡ್ಗಳಲ್ಲಿ ಹಾಸಿಗೆ ಸಂಖ್ಯೆಗಳನ್ನು ಹೆಚ್ಚಳ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಕರೋನಾ ನಿರ್ಮೂಲನೆಗೆ ರೆಮಿಡಿಡಿಸಿವರ್ ಲಸಿಕೆ ಅತ್ಯುತ್ತಮ ಪರಿಣಾಮವಿದೆ. ಒಂದು ಇಂಜೆಕ್ಸ್ನ್ಗೆ ರೂ.ಐದು ಸಾವಿರ ಬೆಲೆ ಇದೆ. ರೆಮಿಡಿಡಿಸಿವರ್ ಚುಚ್ಚುಮದ್ದನ್ನು ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆ ಮಾಡುವ ಮೂಲಕ ಕೋವಿಡ್ ಸೋಂಕಿತ ಬಡವರ ಜೀವ ಉಳಿಸಲು ಕ್ರಮಹಿಸಲಾಗುವುದು ಎಂದು ತಿಳಿಸಿದರು.
ಪಿ.ಎಂ.ಕೇರ್ ಯೋಜನೆಯಡಿ ರಾಜ್ಯಕ್ಕೆ 660 ನಾನ್ಇನ್ವೇಜಿವ್ ವೆಂಟಿಲೇಟರ್ ಪೂರೈಕೆಯಾಗಲಿದ್ದು, ಈ ಪೈಕಿ ಜಿಲ್ಲೆಗೆ 20 ರಿಂದ 25 ವೆಂಟಿಲೇಟರ್ ಪೂರೈಕೆಗೆ ಪ್ರಯತ್ನ ಮಾಡಲಾಗುವುದು. ಜಿಲ್ಲೆಯ ಎಲ್ಲ ಆರೋಗ್ಯ ಕೇಂದ್ರಗಳ ಉನ್ನತೀಕರಣ ಕಾರ್ಯ ನಡೆದೆ. ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಹಿನ್ನಲ್ಲೆಯಲ್ಲಿ ಆರೋಗ್ಯದ ಮೂಲಭೂತ ಸೌಕರ್ಯ ಒದಗಿಸಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಹಾವೇರಿ ಸರ್ಕಾರಿ ಮೆಡಿಕಲ್ ಕಾಲೇಜು ಕಟ್ಟಡ ಶಂಕುಸ್ಥಾಪನೆ ಕಾರ್ಯ ಈ ತಿಂಗಳಾಂತ್ಯದೊಳಗೆ ನೆರವೇರಿಸಲಾಗುವುದು. ವರ್ಚುವಲ್ ಫ್ಲಾಟ್ಫಾರಂ ಮೂಲಕ ಮುಖ್ಯಮಂತ್ರಿಗಳು ಮೆಡಿಕಲ್ ಕಾಲೇಜು ಕಾಮಗಾರಿಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ಹಾವೇರಿ ಜಿಲ್ಲೆಯಲ್ಲಿ ಗುಡ್ಲೈಫ್ ಮಿಲ್ಕ್ ಘಟಕ ಸ್ಥಾಪನೆಗೆ ಉದ್ದೇಶಿಸಲಾಗಿದೆ. ಕೆ.ಎಂ.ಎಫ್.ಸಭೆಯಲ್ಲಿ ಮಂಜೂರಾತಿ ದೊರೆಯಲಿದೆ. ಈ ಟೆಟ್ರಾಪ್ಯಾಕಿಂಗ್ ಘಟಕದ ಸ್ಥಾಪನೆಯಿಂದ ಹಾಲು ಬಹಳ ದಿನಗಳವರೆಗೆ ಹಾಳಾಗದಂತೆ ಇಡಬಹುದು. ಮಾರುಕಟ್ಟೆಗೆ ಅನುಕೂಲಕರವಾಗಿದೆ ಎಂದು ತಿಳಿಸಿದರು.
ಕೈಗಾರಿಕಾ ಟೌನ್ಶಿಪ್ ಬಹಳ ಕಾಜಿಯಿಂದ ಮಾಡಲಾಗುತ್ತಿದೆ. 1000 ಎಕರೆ ಭೂಸ್ವಾಧೀನಕ್ಕೆ ಕ್ರಮವಹಿಸಲಾಗಿದೆ ಹಾಗೂ 400 ಎಕರೆ ಭೂಸ್ವಾಧೀನ ಪ್ರಗತಿಯಲ್ಲಿದೆ. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಫ್ಲಾನ್ ಮಾಡುತ್ತಿದೆ.
ಹಾವೇರಿ ವಿಧಾನಸಭಾ ಕ್ಷೇತ್ರದ ಶಾಸಕ ನೆಹರು ಓಲೇಕಾರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ, ಜಿ.ಪಂ.ಸದಸ್ಯ ಸಿದ್ಧರಾಜ ಕಲಕೋಟಿ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ದೇಸಾಯಿ ಇತರರು ಉಪಸ್ಥಿತರಿದ್ದರು