ಚಿಕ್ಕಮಗಳೂರು, ಆ 15 (DaijiworldNews/PY): ಜಮೀರ್ ಅಹಮದ್ ಮಗುವನ್ನು ಚಿವುಟಿ ತೊಟ್ಟಿಲು ತೂಗುವ ಕಾರ್ಯ ಮಾಡುತ್ತಿದ್ದಾರೆ ಎಂದು ಸಚಿವ ಸಿ ಟಿ ರವಿ ಹೇಳಿದರು.
ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಜಮೀರ್ ಅಹಮದ್ ಅವರು ಬೆಂಗಳೂರಿನಲ್ಲಿ ನಡೆದ ಗಲಭೆಯ ಡೈರೆಕ್ಟರ್ ಎಂದೆನಿಸುತ್ತದೆ. ಅಲ್ಲದೇ, ಅದರ ನಟರು ಯಾರು ಎನ್ನುವುದು ಅವರಿಗೆ ತಿಳಿದಿದೆ ಎಂದರು.
ಜಮೀರ್ ಅಹಮದ್ ಅವರು ಸಹಾಯಕ್ಕೆ ಮುಂದಾಗಿದ್ದು ಮಾನವೀಯ ದೃಷ್ಠಿಯಲ್ಲಿರಬಹುದು. ಯಾರಿಗಾದರೂ ಸಹಾಯ ಮಾಡಲು ಮುಂದಾದರೆ ಯಾವ ಸಂದರ್ಭದಲ್ಲಿ ಮಾಡುತ್ತಾರೆ ಎನ್ನುವ ವಿಚಾರ ಪ್ರಮುಖವಾಗಿರುತ್ತದೆ. ಈ ರೀತಿ ಯಾರೇ ಸಹಾಯಕ್ಕೆ ಮುಂದಾದರೂ ಕೂಡಾ ನಾನು ನಿಮ್ಮೊಂದಿಗಿದ್ದೇನೆ ಎನ್ನುವ ಸಂದೇಶ ನೀಡುತ್ತದೆ ಹೊರತು ಮಾನವೀಯತೆಯ ಸಂದೇಶವನ್ನು ನೀಡುವುದಿಲ್ಲ ಎಂದು ತಿಳಿಸಿದರು.
ಗಲಭೆಯಲ್ಲಿ ಬಲಿಯಾದವರನ್ನು ಅಮಾಯಕರು ಎಂದು ಹೇಳುತ್ತಿದ್ದಾರೆ. ಸತ್ತವರು ಅಮಾಯಕರಾದರೆ ವಾಹನಗಳಿಗೆ ಬೆಂಕಿ ಹಚ್ಚಿದವರು ಯಾರು? ಇವರು ಪೊಲೀಸ್ ಹಾಗೂ ಹಿಂದೂಗಳನ್ನು ಟಾರ್ಗೆಟ್ ಮಾಡಿ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದರು.
ದಲಿತ ಶಾಸಕನ ಮನೆ ಮೇಲೆ ಮಾಡಿದ ದೌರ್ಜನ್ಯದ ಪರ ಮಾತನಾಡದೇ ಯಾಕೆ ಮೌನ ವಹಿಸಿದ್ದಾರೆ. ಈಗ ಇವರ ಅಹಿಂದಾ ಪ್ರೇಮ ಎಲ್ಲಿ ಹೋಗಿದೆ ಎಂದರು.