ಕೊಡಗು, ಆ 15 (DaijiworldNews/PY): ಮನೆಯಲ್ಲಿನ ಒತ್ತಡದಿಂದ ಎಸ್ಡಿಪಿಐಯನ್ನು ದಿನೇಶ್ ಗುಂಡೂರಾವ್ ಸಮರ್ಥಿಸಿಕೊಳ್ಳುತ್ತಿರಬಹುದು ಎಂದು ಸಂಸದ ಪ್ರತಾಪ್ ಸಿಂಹ ವ್ಯಂಗ್ಯ ಮಾಡಿದ್ದಾರೆ.
ಭಾಗಮಂಡಲದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನ ಹಿರಿಯ ಮುಖಂಡರಾದ ದಿನೇಶ್ ಗುಂಡೂರಾವ್ ಅವರು ಶಿಕ್ಷಣವಂತರು. ಅಲ್ಲದೇ, ಅವರು ಉತ್ತಮ ಹಿನ್ನೆಲೆ ಉಳ್ಳವರು. ಆದರೆ, ಅವರು ಯಾವಾಗಲೂ ಜನರ ದಾರಿ ತಪ್ಪಿಸುವಂತ ಕಾರ್ಯ ಮಾಡುತ್ತಿದ್ದಾರೆ ಎಂದರು.
ಎಸ್ಡಿಪಿಐ ಸಂಘಟನೆ ಕಾಂಗ್ರೆಸ್ ಶಾಸಕರ ಮನೆ ಮೇಲೆಯೂ ದಾಳಿ ಮಾಡಿದ್ದಾರೆ. ಹೀಗಾದರೂ ಕೂಡಾ ದಿನೇಶ್ ಗುಂಡುರಾವ್ ಅವರು ಎಸ್ಡಿಪಿಐ ಸಂಘಟನೆಯನ್ನು ಸಮರ್ಥಿಸುತ್ತಿದ್ದಾರೆ. ಮನೆಯಲ್ಲಿ ಅವರಿಗೆ ಒತ್ತಡ ಇದೆಯೋ ಏನೋ ಎಂದು ವ್ಯಂಗ್ಯವಾಡಿದರು.
ಬೆಂಗಳೂರಿನ ಗಲಭೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ಡಿಪಿಐ ಹಾಗೂ ಪಿಎಫ್ಐ ಅನ್ನು ನಿಷೇಧ ಮಾಡಬೇಕು ಎಂದು ಆಗ್ರಹಿಸಿದ ಅವರು, ಗೃಹ ಸಚಿವರೇ ಎಸ್ಟಿಪಿಐ ನಿಷೇಧದ ವಿಚಾರವಾಗಿ ಸ್ಪಷ್ಟವಾಗಿ ಮಾಹಿತಿ ನೀಡಿದ್ದಾರೆ. ಗೃಹ ಸಚಿವರು ಹಾಗೂ ಸಿಎಂ ಅವರ ಮೇಲೆ ನಂಬಿಕೆ ಇದೆ. ನಿಷೇಧದ ಪ್ರಕ್ರಿಯೆಯು ಮಂಗಳೂರಿನ ಗಲಭೆಯ ನಂತರ ಆರಂಭವಾಗಿದೆ. ಇನ್ನು ಬೆಂಗಳೂರು ಗಲಭೆಗೆ ಸಂಬಂಧಿಸಿದಂತೆ ಪೂರಕವಾದಂತ ದಾಖಲೆಗಳಿವೆ ಎಂದರು.