ನವದೆಹಲಿ, ಆ. 15 (DaijiworldNews/MB) : 74 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭ ಪ್ರಧಾನಿ ನರೇಂದ್ರ ಮೋದಿಯವರು 'ವಂದೇ ಮಾತರಂ' ಎಂದು ಘೋಷಣೆ ಕೂಗಿದಾಗ ಎಲ್ಲರೂ ಒಟ್ಟಾಗಿ ಘೋಷಣೆ ಕೂಗಿದ್ದು ಈ ಸಂದರ್ಭದಲ್ಲಿ ಅರವಿಂದ್ ಕೇಜ್ರಿವಾಲ್ ಸುಮ್ಮನೆ ಕೂತಿದ್ದರು. ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರ ಈ ನಡೆಯನ್ನು ಬಿಜೆಪಿ ಪ್ರಶ್ನಿಸಿದೆ.
ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ವೇಳೆ ಪ್ರಧಾನಿ ಮೋದಿಯವರು ತಮ್ಮ ಭಾಷಣ ಮುಕ್ತಾಯ ಮಾಡುವಾಗ ತಮ್ಮ ಎರಡೂ ಕೈಗಳನ್ನು ಎತ್ತಿ 'ಭಾರತ್ ಮಾತಾ ಕಿ ಜೈ' ಮತ್ತು 'ವಂದೇ ಮಾತರಂ' ಘೋಷಣೆಗಳನ್ನು ಕೂಗುವಂತೆ ಪ್ರಧಾನಿ ಮೋದಿ ಹೇಳಿದರು. ಈ ಸಂದರ್ಭದಲ್ಲಿ ಎಲ್ಲರೂ ಕೈ ಎತ್ತಿ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು, ಆದರೆ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರು 'ವಂದೇ ಮಾತರಂ' ಘೋಷಣೆಯ ಸಂದರ್ಭದಲ್ಲಿ ಸುಮ್ಮನೇ ಕೂತಿದ್ದರು.
ಈ ಬಗ್ಗೆ ಕೇಜ್ರಿವಾಲ್ ಅವರನ್ನು ಪ್ರಶ್ನಿಸಿರುವ ದೆಹಲಿ ಬಿಜೆಪಿ ವಕ್ತಾರ ತಾಜಿಂದರ್ ಪಾಲ್ ಸಿಂಗ್ ಬಗ್ಗಾ ಅವರು, ''ಭಯೋತ್ಪಾದಕರಿಗಾಗಿ ಎತ್ತುವ ಕೈ, ವಂದೇ ಮಾತರಂ ಹೇಳಲು ಯಾಕೆ ಎತ್ತಿಲ್ಲ? ವಂದೇ ಮಾತರಂಗೆ ಗೌರವ ನೀಡುವುದು ನಿಮ್ಮ ಮತ ಬ್ಯಾಂಕ್ಗೆ ಧಕ್ಕೆ ಉಂಟು ಮಾಡುತ್ತದೆಯೇ? ಭಯೋತ್ಪಾದಕರಿಗಾಗಿ ನಿಮ್ಮ ಕೈ ಬೇಗನೇ ಮೇಲೆ ಬಂದವು. ಸೈನ್ಯದಿಂದ ಪುರಾವೆ ಕೇಳುವಾಗ ನಿಮ್ಮ ಕೈಗಳು ಬೇಗನೆ ಮೇಲೆದ್ದವು. ಆದರೆ ಇಂದು ವಂದೇ ಮಾತರಂ ಹೇಳಲು ನಿಮಗೆ ಯಾವ ರೋಗ'' ಎಂದು ವಾಗ್ದಾಳಿ ನಡೆಸಿದ್ದಾರೆ.
''ಚುನಾವಣೆಯ ಸಂದರ್ಭದಲ್ಲಿ ಕೇಜ್ರಿವಾಲ್ ಅವರು ಮುಸ್ಲಿಮರು ತನಗೆ ಮತ ಹಾಕಬೇಕು ಎಂದು ಹೇಳುತ್ತಲೇ ಇದ್ದರು. ಇಂದು ಅದೇ ಮತಬ್ಯಾಂಕ್ ಅನ್ನು ಮೆಚ್ಚಿಸುವ ಪ್ರಯತ್ನದಿಂದ ವಂದೇ ಮಾತರಂ ಹೇಳಲು ಕೈ ಎತ್ತುತ್ತಿಲ್ಲವೇ? ವಂದೇ ಮಾತರಂ ಘೋಷಣೆ ಬಿಜೆಪಿ ಅಥವಾ ಯಾವುದೇ ಪಕ್ಷಕ್ಕೆ ಸೇರಿದ ಘೋಷಣೆಯಲ್ಲ. ಈ ವಿಚಾರವಾಗಿ ನಾವು ಆಮ್ ಆದ್ಮಿ ಪಕ್ಷದವರಿಗೆ ತಿಳಿಸುವ ಪ್ರಯತ್ನ ಮಾಡಿದೆವು. ಆದರೆ ಅದು ಸಾಧ್ಯವಾಗಿಲ್ಲ'' ಎಂದು ಹೇಳಿದರು.