ಬೆಂಗಳೂರು, ಆ. 15 (DaijiworldNews/MB) : ''ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಗೆ ಪ್ರತಿಕ್ರಿಯಿಸುವಾಗ ಏಕವಚನದಲ್ಲಿ ಬಳಕೆಗೆ ವಿಷಾಧ ವ್ಯಕ್ತಪಡಿಸುತ್ತೇನೆ'' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನಗರದ ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಗಲಭೆ ಕುರಿತು ಮಾತನಾಡಿದ ಬೊಮ್ಮಾಯಿಯವರು ಕಾಂಗ್ರೆಸ್ನಲ್ಲಿ ಆಂತರಿಕ ಬಿನ್ನಾಭಿಪ್ರಾಯವಿದೆ ಎಂದು ಹೇಳಿದ್ದು ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಡಿಕೆಶಿಯವರು, ''ನಮ್ಮ ಪಕ್ಷದಲ್ಲಿ ಭಿನ್ನಾಭಿಪ್ರಾಯವಿದೆ ಎಂದು ಹೇಳಲು ಅವನ್ಯಾರು? ಅವನೇನು ಅಥಾರಿಟಿಯಾ? ಸಬ್ಇನ್ಸ್ಪೆಕ್ಟರಾ? ಆಯೋಗನಾ?'' ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರು.
ಇದೀಗ ಈ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಅವರು, ''ಬಸವರಾಜ ಬೊಮ್ಮಾಯಿ ಅವರ ಗೃಹ ಸಚಿವ ಸ್ಥಾನದ ಬಗ್ಗೆ ನನಗೆ ಗೌರವವಿದೆ. ಉದ್ದೇಶಪೂರ್ವಕವಾಗಿ ಏಕವಚನ ಬಳಸಿಲ್ಲ. ಮಾತಿನ ಬರದಲ್ಲಿ ಪ್ರಮಾದವಾಗಿದೆ. ಇದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತೇನೆ'' ಎಂದು ಹೇಳಿದ್ದಾರೆ.
ಹಾಗೆಯೇ ''ಕಾಂಗ್ರೆಸ್ನಲ್ಲಿ ಯಾವುದೇ ಭಿನಾಭಿಪ್ರಾಯವಿಲ್ಲ. ಕಾವಲ್ ಬೈರಸಂದ್ರದಲ್ಲಿ ಬಿಜೆಪಿಯವರ ಷಡ್ಯಂತ್ರದಿಂದ ಗಲಭೆಯಾಗಿದ್ದು ಕಾಂಗ್ರೆಸ್ ಈ ಬಗ್ಗೆ ಆಂತರಿಕ ತನಿಖೆ ನಡೆಸುತ್ತದೆ'' ಎಂದು ತಿಳಿಸಿದ್ದಾರೆ.
''ಬಿಜೆಪಿಯವರು ಸದ್ಯ ಪಾಲಿಕೆ ಸದಸ್ಯರಿಗೆ ನೋಟಿಸ್ ನೀಡಿ ಬೆದರಿಕೆ ಹಾಕಿ ತಮ್ಮ ತಪ್ಪನ್ನು ಮುಚ್ಚುವ ಯತ್ನ ಮಾಡುತ್ತಿದ್ದಾರೆ. ಬಿಜೆಪಿಯ ಈ ಬೆದರಿಕೆಗೆ ನಾವು ಹೆದರುವುದಿಲ್ಲ'' ಎಂದು ಹೇಳಿದ್ದಾರೆ.