ನವದೆಹಲಿ, ಆ. 15 (DaijiworldNews/MB) : ಕಾಲಪಾನಿ ಗಡಿ ವಿವಾದದ ನಂತರ ಇದೇ ಮೊದಲ ಬಾರಿಗೆ ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಕರೆ ಮಾಡಿ ಮಾತನಾಡಿದ್ದಾರೆ.
ಈ ಬಗ್ಗೆ ವಿದೇಶಾಂಗ ಸಚಿವಾಲಯ(ಎಂಇಎ) ಪ್ರಕಟಣೆಯಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆಯ ನಿಟ್ಟಿನಲ್ಲಿ ನೇಪಾಳ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿ ಸುಮಾರು 11 ನಿಮಿಷಗಳ ಕಾಲ ಮಾತನಾಡಿದ್ದು ಭಾರತೀಯರು ಹಾಗೂ ಕೇಂದ್ರ ಸರ್ಕಾರಕ್ಕೆ ಸ್ವಾತಂತ್ರ್ಯ ದಿನಾಚರಣೆಗೆ ಶುಭಾಶಯ ತಿಳಿಸಿದ್ದಾರೆ. ಹಾಗೆಯೇ ಭಾರತವು ವಿಶ್ವಸಂಸ್ಥೆ ಭದ್ರತಾ ಮಂಡಳಿ ಖಾಯಂ ಸದಸ್ಯರಾಗಿ ಆಯ್ಕೆಯಾಗಿರುವುದಕ್ಕೂ ಸುಮಾರು ಒಂದುವರೆ ತಿಂಗಳ ಬಳಿಕ ಅಭಿನಂದನೆ ತಿಳಿಸಿದ್ದಾರೆ. ಕೊರೊನಾ ವಿರುದ್ದ ಹೋರಾಟದಲ್ಲಿ ಜೊತೆಯಾಗುವ ಬಗ್ಗೆ ಉಭಯ ದೇಶದ ನಾಯಕರು ಮಾತುಕತೆ ನಡೆಸಿದ್ದು ಪ್ರಧಾನಿ ಮೋದಿಯವರು ನೇಪಾಳಕ್ಕೆ ಬೆಂಬಲ ನೀಡುವ ಭರವಸೆ ನೀಡಿದ್ದಾರೆ.
ನೇಪಾಳವು ಭಾರತದ ಭೂ ಪ್ರದೇಶವನ್ನು ಸೇರಿದ ಭೂ ಪಟವನ್ನು ಬಿಡುಗಡೆ ಮಾಡಿದ್ದು ನೇಪಾಳ ಸಂಸತ್ ಇದಕ್ಕೆ ಅಂಗೀಕಾರ ನೀಡಿದೆ. ರಾಮನ ಜನ್ಮಭೂಮಿ ನೇಪಾಳ ಎಂದು ವಾದಿಸುತ್ತಾ ಬಂದಿರುವ ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿಯವರು, ಮಡಿಯ ಪುರಸಭೆಯನ್ನು ಅಯೋಧ್ಯಾಪುರಿಯೆಂದು ಮರುನಾಮಕರಣ ಮಾಡಲು ನೇಪಾಳದ ಚೆತ್ವಾನ್ ಜಿಲ್ಲೆಯ ಮಡಿಯ ಮೇಯರ್ಗೆ ಸೂಚನೆ ನೀಡಿದ್ದಾರೆ.