ಚಿತ್ತೂರು, ಜ.25 (DaijiworldNews/MB) : ದಂಪತಿಗಳು ತಮ್ಮ ಇಬ್ಬರು ಹೆಣ್ಣುಮಕ್ಕಳನ್ನು ಡಂಬ್ಬೆಲ್ ಎಂದು ಶಂಕಿಸಲಾಗಿರುವ ಆಯುಧದಿಂದ ಹೊಡೆದು ಸಾಯಿಸಿರುವ ಆಘಾತಕಾರಿ ಘಟನೆ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲೆ ಎಂಬಲ್ಲಿನ ಶಿವನಗರ್ ಪ್ರದೇಶದಲ್ಲಿ ನಡೆದಿದೆ. ದಂಪತಿ ಮೂಢನಂಬಿಕೆಗೆ ಬಲಿ ಬಿದ್ದು ತಮ್ಮ ಮಕ್ಕಳನ್ನೇ ಹೊಡೆದು ಕೊಂದಿದ್ದಾರೆ ಎಂದು ವರದಿಯಾಗಿದೆ.

ದಂಪತಿಗಳಾದ ಪದ್ಮಜಾ ಮತ್ತು ಪುರುಷೋತ್ತಮ್ ನಾಯ್ಡು ಈ ಕೃತ್ಯ ಎಸಗಿದವರು. ಪದ್ಮಜಾ ಖಾಸಗಿ ಶಾಲೆಯೊಂದರ ಸಂಚಾಲಕಿಯಾಗಿದ್ದರೆ, ನಾಯ್ಡು ನಗರದ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲನಾಗಿದ್ದಾನೆ. ಅವರ ಹಿರಿಯ ಮಗಳು ಅಲೈಕ್ಯ (27) ಭೋಪಾಲ್ನಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದರೆ, ಕಿರಿಯ ಮಗಳು ಸಾಯಿ ದಿವ್ಯಾ (22) ಬಿಬಿಎ ಮಾಡಿದ್ದಾರೆ. ಮುಂಬೈನ ಎಆರ್ ರಹಮಾನ್ ಮ್ಯೂಸಿಕ್ ಶಾಲೆಯ ವಿದ್ಯಾರ್ಥಿಯಾಗಿದ್ದ ದಿವ್ಯಾ, ಕೊರೊನಾ ಲಾಕ್ಡೌನ್ ಕಾರಣ ಮನೆಗೆ ವಾಪಾಸ್ ಬಂದಿದ್ದಾರೆ ಎಂದು ಹೇಳಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಮದನಪಲ್ಲೆ ಡಿಎಸ್ಪಿ ರವಿ ಮನೋಹರ ಚಾರಿ, ''ಕುಟುಂಬ ಸದಸ್ಯರು ಕೊರೊನಾ ಕಾರಣದಿಂದಾಗಿ ಹೆಚ್ಚಾಗಿ ಮನೆಯಲ್ಲೇ ಇರಬೇಕಾದ ಬಳಿಕ ವಿಚಿತ್ರವಾಗಿ ವರ್ತಿಸಲು ಆರಂಭಿಸಿದ್ದಾರೆ'' ಎಂದು ಹೇಳಿದ್ದಾರೆ.
ಮನೆಯಿಂದ ವಿಚಿತ್ರವಾದ ಮತ್ತು ಭಾರೀ ಶಬ್ದಗಳು ಕೇಳಿಬಂದ ಹಿನ್ನೆಲೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಅದರಂತೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಆರಂಭದಲ್ಲಿ ದಂಪತಿಗಳು ಪೊಲೀಸರನ್ನು ಮನೆಗೆ ಪ್ರವೇಶಿಸದಂತೆ ತಡೆದಿದ್ದಾರೆ ಎನ್ನಲಾಗಿದೆ.
ಪೊಲೀಸರು ಮನೆಯೊಳಗೆ ಪ್ರವೇಶಿಸಿದಾಗ, ಒಬ್ಬಳು ಯುವತಿ ಪೂಜಾ ಕೋಣೆಯಲ್ಲಿ, ಇನ್ನೊಬ್ಬ ಯುವತಿ ಇನ್ನೊಂದು ಕೋಣೆಯಲ್ಲಿ ಸತ್ತು ಬಿದ್ದಿರುವುದು ಗಮನಕ್ಕೆ ಬಂದಿದ್ದು, ಸ್ಥಳದಲ್ಲಿ ಕೆಂಪು ಬಣ್ಣದ ಬಟ್ಟೆ, ಪೂಜಾ ಸಾಮಾಗ್ರಿಗಳು ಕಂಡು ಬಂದಿದೆ.
"ನಮ್ಮ ಪ್ರಾಥಮಿಕ ತನಿಖೆಯ ಸಮಯದಲ್ಲಿ, ದಂಪತಿಗಳು ತಮ್ಮ ಮೂವರು ಹೆಣ್ಣುಮಕ್ಕಳು ಮತ್ತೆ ಜೀವ ಪಡೆಯುತ್ತಾರೆ. ಅದಕ್ಕಾಗಿ ಮನೆಯಲ್ಲಿ ಶವಗಳನ್ನು ಒಂದು ದಿನ ಇಡಬೇಕು ಎಂದು ಮನವಿ ಮಾಡಿದ್ದಾರೆ. ಈ ಮೂಲಕ ಈ ದಂಪತಿ ಅತೀವವಾಗಿ ಮೂಢನಂಬಿಕೆಗೆ ಒಳಗಾಗಿರುವುದು ತಿಳಿದುಬಂದಿದೆ" ಎಂದು ಡಿಎಸ್ಪಿ ಹೇಳಿದ್ದಾರೆ.
ಕಲಿಯುಗವು ಇಂದು ರಾತ್ರಿ ಕೊನೆಗೊಳ್ಳಲಿದ್ದು, ಸತ್ಯಯುಗದ ಆರಂಭದಲ್ಲಿ ನಾಳೆ ನಮ್ಮ ಮಕ್ಕಳು ಪುನರ್ಜನ್ಮ ಪಡೆಯಲಿದ್ದಾರೆ. ಆದ್ದರಿಂದ ನಮ್ಮ ಹೆಣ್ಣುಮಕ್ಕಳನ್ನು ಬಲಿ ನೀಡುವಂತೆ ದೈವಿಕ ಸಂದೇಶ ಬಂದಿರುವುದಾಗಿ ದಂಪತಿ ಪೊಲೀಸರಲ್ಲಿ ಹೇಳಿಕೊಂಡಿದ್ದಾರೆ.
ಪೊಲೀಸರು ಶವಗಳನ್ನು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ವರ್ಗಾಯಿಸಿದ್ದಾರೆ. ವಿಚಾರಣೆಗಾಗಿ ದಂಪತಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು ಪ್ರಕರಣ ದಾಖಲಾಗಿದೆ.