ಶ್ರೀನಗರ,ಫೆ.02 (DaijiworldNews/HR): ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಆಸ್ಪತ್ರೆಗೆ ತೆರಳುವಾಗ ಮಾರ್ಗ ಮಧ್ಯೆ ಸೇನಾ ವಾಹನದಲ್ಲೇ ಮಹಿಳೆ ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ.

ಮಹಿಳೆಯೊಬ್ಬರು ಹೆರಿಗೆ ನೋವಿನಿಂದ ಬಳಲುತ್ತಿದ್ದು, ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಬೇಕಿತ್ತು, ಆದರೆ ಹಿಮಪಾತದ ಕಾರಣ ಆಂಬುಲೆನ್ಸ್ ಬರುತ್ತಿಲ್ಲ, ಹಾಗಾಗಿ ನೆರವಿಗೆ ಧಾವಿಸುವಂತೆ ಕಲಾರೂಸ್ ಕಂಪನಿ ಕಮಾಂಡರ್ಗೆ ಆಶಾ ಕಾರ್ಯಕರ್ತೆಯೊಬ್ಬರು ಕರೆ ಮಾಡಿ ಮನವಿ ಮಾಡಿದ್ದು,ತಕ್ಷಣ ವೈದ್ಯಕೀಯ ತಂಡದ ಜೊತೆಗೆ ಸೇನಾ ವಾಹನವನ್ನು ನರಿಕೋಟ್ ಪ್ರದೇಶಕ್ಕೆ ಕಳುಹಿಸಲಾಗಿದ್ದು, ಮಹಿಳೆಯನ್ನು ಸೇನಾ ವಾಹನದಲ್ಲೇ ಕರೆದುಕೊಂಡು ಆಸ್ಪತ್ರೆಗೆ ತೆರಳುವಾಗ ಪರಿಸ್ಥಿತಿ ಗಂಭೀರವಾಗಿರುವುದರಿಂದ ವಾಹನವನ್ನು ನಿಲ್ಲಿಸಲು ಗರ್ಭಿಣಿ ಜೊತೆಗಿದ್ದ ಆಶಾ ಕಾರ್ಯಕರ್ತೆ ಸೇನಾ ಸಿಬ್ಬಂದಿಗೆ ಹೇಳಿ ಬಳಿಕ ಸೇನೆಯ ವೈದ್ಯಕೀಯ ತಂಡದ ಜೊತೆ ಆಶಾ ಕಾರ್ಯಕರ್ತೆ ವಾಹನದಲ್ಲೇ ಹೆರಿಗೆ ಮಾಡಿಸಿದ್ದಾರೆ ಎಂದು ವರದಿಯಾಗಿದೆ.
ಇನ್ನು ತಾಯಿ ಮತ್ತು ಮಗುವನ್ನು ಕಲರೂಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹಿಮಪಾತದ ವೇಳೆ ತುರ್ತು ವೈದ್ಯಕೀಯ ಚಿಕಿತ್ಸೆ ಪಡೆಯಲು ಕಣಿವೆಯ ಜನ ಅನುಭವಿಸುತ್ತಿರುವ ಸಂಕಷ್ಟಕ್ಕೆ ಈ ಘಟನೆ ಸಾಕ್ಷಿಯಾಗಿದೆ ಎನ್ನಲಾಗಿದೆ.