ನವದೆಹಲಿ, ಫೆ.02 (DaijiworldNews/MB) : 2016ರಲ್ಲಿ ಕೇಂದ್ರ ಸರ್ಕಾರ ನೋಟು ಅಮಾನ್ಯೀಕರಣ ಮಾಡಿದ ವೇಳೆ ಅಕ್ರಮ ಹಣಕಾಸು ವ್ಯವಹಾರ ನಡೆಸಿದ ಆರೋಪದಲ್ಲಿ ತನಿಖೆಗೆ ಒಳಗಾಗಿರುವ ಹೈದರಾಬಾದ್ ಮೂಲದ ವಿವಿಧ ಚಿನ್ನಾಭರಣ ಮಳಿಗೆಗಳು ಮತ್ತು ಅವರ ಪ್ರಮೋಟರ್ಗಳ 130 ಕೋಟಿ ಆಸ್ತಿಯನ್ನು ಜಾರಿ ನಿರ್ದೇಶನಾಲಯವು ಜಪ್ತಿ ಮಾಡಿದೆ.

ನೋಟು ಅಮಾನ್ಯೀಕರಣದ ಸಂದರ್ಭ ತೆಲಂಗಾಣ ಪೊಲೀಸರು ಆಭರಣ ಮಳಿಗೆಗಳ ಮಾಲೀಕರ ಮನೆಗಳ ಮೇಲೆ ದಾಳಿ ನಡೆಸಿ ಎಫ್ಐಆರ್ ದಾಖಲಿಸಿದ್ದು ಈ ಎಫ್ಐಆರ್ ಆಧಾರದಲ್ಲಿ ಜಾರಿ ನಿರ್ದೇಶನಾಲಯವು ಕ್ರಮಕೈಗೊಂಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಇಡಿ, ''ವೈಷ್ಣವಿ ಬುಲಿಯನ್ ಪ್ರೈವೇಟ್ ಲಿಮಿಟೆಡ್, ಮುಸದ್ದಿಲಾಲ್ ಜ್ಯುವೆಲ್ಲರ್ಸ್ ಪ್ರೈವೇಟ್ ಲಿಮಿಟೆಡ್, ಮುಸದ್ದಿಲಾಲ್ ಜೆಮ್ಸ್ ಮತ್ತು ಜ್ಯುವೆಲ್ಸ್ ಪ್ರೈವೇಟ್ ಲಿಮಿಟೆಡ್ ವಿರುದ್ದ ಕ್ರಮಕೈಗೊಳ್ಳಲಾಗಿದ್ದು, ಒಟ್ಟು 130.57 ಕೋಟಿ ಆಸ್ತಿಯನ್ನು ಜಪ್ತಿ ಮಾಡಲಾಗಿದೆ. ಇದರಲ್ಲಿ 41 ಸ್ಥಿರ ಆಸ್ತಿಗಳು, ಷೇರುಗಳು ಮತ್ತು ಆಭರಣಗಳ ಮೇಲೆ ಮಾಡಿದ ಹೂಡಿಕೆಗಳು ಸೇರಿದೆ. ಹಾಗೆಯೇ ಕೆಲವು ವರ್ಷಗಳ ಹಿಂದೆ ನಡೆಸಿದ ದಾಳಿಗಳಲ್ಲಿ ವಶಪಡಿಸಿಕೊಂಡ 83.30 ಕೋಟಿ ಮೊತ್ತದ ಚಿನ್ನದ ಗಟ್ಟಿಯೂ ಕೂಡಾ ಇದರಲ್ಲಿ ಒಳಗೊಂಡಿದೆ'' ಎಂದು ತಿಳಿಸಿದೆ.