ಬೆಂಗಳೂರು, ಫೆ.15(DaijiworldNews/PY): "ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವು ಭಾವನಾತ್ಮಕ ವಿಚಾರವಾಗಿದೆ" ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.

ಶ್ರೀರಾಮ ಮಂದಿರ ನಿರ್ಮಾಣಕ್ಕೆ ಬಿಬಿಎಂಪಿಯ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ 5 ಲಕ್ಷ ರೂ. ದೇಣಿಗೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಸುಪ್ರೀಂ ಕೋರ್ಟ್ ರಾಮ ಮಂದಿರದ ವಿಚಾರದ ಬಗ್ಗೆ ತೀರ್ಪು ನೀಡಿದ ಬಳಿಕ ಕೇಂದ್ರ ಸರ್ಕಾರ ದಟ್ಟವಾದ ತೀರ್ಮಾನ ಕೈಗೊಂಡಿದೆ" ಎಂದಿದ್ದಾರೆ.
"ಶ್ರೀರಾಮ ಮಂದಿರದ ನಿರ್ಮಾಣ ಈ ದೇಶದ ಜನರ ಸುದೀರ್ಘ ಕನಸಾಗಿದೆ. ರಾಮ ಮಂದಿರ ನಿರ್ಮಾಣಕ್ಕೆ ಹಲವು ಮಂದಿ ತಾವೇ ಕಟ್ಟಡ ನಿರ್ಮಾಣ ಮಾಡುವುದಾಗಿ ಮುಂದೆ ಬಂದಿದ್ದರು. ಆದರೆ, ಶ್ರೀರಾಮ ಮಂದಿರದ ನಿರ್ಮಾಣ ಕಾರ್ಯದಲ್ಲಿ ಈ ದೇಶ ಎಲ್ಲರೂ ಕೂಡಾ ಪಾಲ್ಗೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಇದಕ್ಕೆ ಅವಕಾಶ ಕಲ್ಪಿಸಿಲ್ಲ. ದೇಶದಲ್ಲಿ 1947ರ ಬಳಿಕ ಸರ್ಕಾರದ ಯಾವುದೇ ಹಣಕಾಸು ನೆರವಿಲ್ಲದೇ, ಬೃಹತ್ ಯೋಜನೆ ನಡೆಯುತ್ತಿದೆ ಎಂದರೆ ಅದು ಶ್ರೀರಾಮ ಮಂದಿರದ ನಿರ್ಮಾಣ ಕಾರ್ಯ" ಎಂದು ತಿಳಿಸಿದ್ದಾರೆ.
"ಶ್ರೀರಾಮ ಮಂದಿರದ ನಿರ್ಮಾಣ ಕಾರ್ಯ ಈ ದೇಶದ ಪ್ರತಿಯೋರ್ವರ ಕೊಡುಗೆಯಿಂದ ಆಗುತ್ತಿದೆ. ಶ್ರೀರಾಮ ಮಂದಿರದೊಂದಿಗೆ ರಾಮನ ಆದರ್ಶದ ಪಾಲನೆಯು ನಡೆಯಬೇಕು" ಎಂದಿದ್ದಾರೆ.