ನವದೆಹಲಿ, ಫೆ.19 (DaijiworldNews/PY): ಯೋಗ ಗುರು ಬಾಬಾ ರಾಮ್ದೇವ್ ಅವರು ಶುಕ್ರವಾರ ಪತಂಜಲಿಯಿಂದ ಕೊರೊನಾಕ್ಕಾಗಿ ಮೊದಲ ಸಾಕ್ಷ್ಯ ಆಧಾರಿತ ಔಷಧ ಕುರಿತು ವೈಜ್ಞಾನಿಕ ಸಂಶೋಧನಾ ಪ್ರಬಂಧವನ್ನು ಬಿಡುಗಡೆ ಮಾಡಿದ್ದಾರೆ.

ಕಾರ್ಯಕ್ರಮದಲ್ಲಿ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಹಾಗೂ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಉಪಸ್ಥಿತರಿದ್ದರು.
ಕೊರೊನಾಕ್ಕಾಗಿ ಇಮ್ಯುನಿಟಿ ಬೂಸ್ಟರ್ ಮೆಡಿಸಿನ್ ಕೊರೊನಿಲ್ಗಾಗಿ ಪತಂಜಲಿ ಆಯುರ್ವೇದವು ಪ್ರತಿದಿನ ಸುಮಾರು ಹತ್ತು ಲಕ್ಷ ಪ್ಯಾಕ್ಗಳಿಗೆ ಬೇಡಿಕೆ ಇಟ್ಟಿದೆ ಎಂದು ಈ ಹಿಂದೆ ರಾಮ್ದೇವ್ ಅವರು ಆರೋಪಿಸಿದ್ದರು.
ಕಳೆದ ವರ್ಷ ಜೂನ್ನಲ್ಲಿ, ಕೊರೊನಾ ಸೋಂಕಿತರನ್ನು ಕೊರೊನಿಲ್ ಗುಣಪಡಿಸಬಹುದು ಎಂದು ರಾಮ್ದೇವ್ ಹೇಳಿದ್ದರು. ಆದರೆ, ಆಯುಷ್ ಸಚಿವಾಲಯವು ತಕ್ಷಣವೇ ಇದರ ಮಾರಾಟವನ್ನು ನಿರ್ಬಂಧಿಸಿತ್ತು. ನಂತರ ಕೇಂದ್ರ ಸಚಿವಾಲಯವು ಪತಂಜಲಿಯ ಉತ್ಪನ್ನವನ್ನು ರೋಗ ನಿರೋಧಕ ವರ್ಧಕವಾಗಿ ಮಾತ್ರ ಮಾರಾಟ ಮಾಡಬಹುದು. ಆದರೆ, ಕೊರೊನಾಕ್ಕೆ ಪರಿಹಾರವಾಗಿ ಅಲ್ಲ ಎಂದು ಹೇಳಿತ್ತು
ಚೆನ್ನೈ ಮೂಲದ ಕಂಪೆನಿಯೊಂದು ಸಲ್ಲಿಸಿದ್ದ ಅರ್ಜಿಯ ಮೇರೆಗೆ ಮದ್ರಾಸ್ ಹೈಕೋರ್ಟ್ ಜುಲೈ 30ರವರೆಗೆ ಕೊರೊನಿಲ್ ಟ್ರೇಡ್ಮಾರ್ಕ್ ಬಳಸದಂತೆ ಪತಂಜಲಿಗೆ ನಿರ್ಬಂಧ ಹೇರಿತ್ತು.