ರಾಯಚೂರು,ಫೆ.19 (DaijiworldNews/HR): "ಅಯೋದ್ಯೆ ರಾಮ ಮಂದಿರ ನಿರ್ಮಾಣಕ್ಕೆ 10 ರೂ. ದೇಣಿಗೆ ನೀಡಿದವರು ಲೆಕ್ಕ ಕೇಳಲಿ. ಅದು ಬಿಟ್ಟು ಸುಪ್ರೀಂ ಕೋರ್ಟ್ ತೀರ್ಪಿಗೂ ಗೌರವ ನೀಡದೆ ವಿವಾದಿತ ಸ್ಥಳ ಎಂದಿರುವ ಸಿದ್ದರಾಮಯ್ಯ ಯಾವನು ಲೆಕ್ಕ ಕೇಳೋಕೆ" ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಮಮಂದಿರದ ನಿರ್ಮಾಣದ ಸ್ಥಳ ವಿವಾದಿತ ಸ್ಥಳವಾಗಿತ್ತು, ಅಲ್ಲಿ ಮಂದಿರ ನಿರ್ಮಾಣಕ್ಕೆ ತಾವು ಹಣ ನೀಡುವುದಿಲ್ಲ ಎಂದಿರುವ ಸಿದ್ದರಾಮಯ್ಯ ಸುಪ್ರೀಂ ಕೋರ್ಟ್ ತೀರ್ಪಿಗೂ ಗೌರವೆ ನೀಡದೆ ಮಾತನಾಡಿದ್ದಾನೆ. ಅವನು ಮೋದಿ ಬಗ್ಗೆ ಏಕವಚನದಲ್ಲಿ ಮಾತನಾಡಬಹುದೇ? ಕೂಲಿ ಮಾಡುವ ಒಬ್ಬ 10 ರೂ. ನೀಡಿದ್ದಾರೆ. ಅವರು ಲೆಕ್ಕ ಕೇಳಲಿ. ದೇಣಿಗೆ ನೀಡುವುದಿಲ್ಲ ಎಂದಿರುವ ಇವನಾರು ಲೆಕ್ಕ ಕೇಳಲು" ಎಂದರು.
ಇನ್ನು "ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಣ ನೀಡದವರ ಮನೆಗಳಿಗೆ ಗುರುತು ಹಾಕಲಾಗಿದೆ ಎಂದಿದ್ದಾರೆ. ರಾಯಚೂರಿನಲ್ಲಿ ಯಾರ ಮನೆಗೆ ಗುರುತು ಮಾಡಲಾಗಿದೆ ತೋರಿಸಲಿ. ಮೊದಲಿಗೆ ಅವರು ರಾಮನ ಬಗ್ಗೆ ಹಗುರವಾಗಿ ಮಾತನಾಡುವ ಪ್ರವೃತ್ತಿ ಬಿಡಲಿ" ಎಂದಿದ್ದಾರೆ.