ಬೆಂಗಳೂರು, ಫೆ. 20 (DaijiworldNews/HR): ಇನ್ನು ಮುಂದೆ ಕೊರೊನಾ ಸೋಂಕು ಪತ್ತೆ ಮತ್ತು ಪರೀಕ್ಷೆಗೆ ಆಸ್ಪತ್ರೆಗೆ ಅಥವಾ ಪ್ರಯೋಗಾಲಯಗಳಿಗೆ ಹೋಗುವ ಅಗತ್ಯವಿಲ್ಲ, ಸೋಂಕು ಪತ್ತೆ ಮಾಡಬಲ್ಲ ಸಂಚಾರಿ ಪ್ರಯೋಗಾಲಯಗಳು (ಮೊಬೈಲ್ ಲ್ಯಾಬ್) ಮನೆ ಬಾಗಿಲಿಗೇ ಬರಲಿವೆ.

ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಇತರ ಕೆಲವು ಸಂಸ್ಥೆಗಳ ಜತೆಗೂಡಿ ಈ ವಿಶಿಷ್ಟ ಸಂಚಾರಿ ಪ್ರಯೋಗಾಲಯವನ್ನು ಅಭಿವೃದ್ಧಿಪಡಿಸಿದ್ದು, ವಿಶ್ವದಲ್ಲೇ ಈ ರೀತಿಯ ಪ್ರಯೋಗಾಲಯ ಪ್ರಥಮ ಎಂದು ಐಐಎಸ್ಸಿ ಹೇಳಿಕೊಂಡಿದೆ.
ಇನ್ನು ಈ ಸಂಚಾರಿ ಪ್ರಯೋಗಾಲಯವು ಬಿಎಸ್ಎಲ್-2+ ಮೂಲ ಸೌಕರ್ಯ ಮತ್ತು ಸಾಧನಗಳನ್ನು ಒಳಗೊಂಡಿದ್ದು, ಮಿನಿ ಸ್ಪಿನ್ಸ್, ವೊರ್ಟೆಕ್ಸ್ ಮಿಕ್ಸರ್, ಸೆಂಟ್ರಿಫ್ಯೂಗ್ ಮುಂತಾದ ಸಾಧನಗಳನ್ನು ಒಳಗೊಂಡಿದೆ. ಅಷ್ಟೆ ಅಲ್ಲದೆ ಆರ್ಟಿ- ಪಿಸಿಆರ್ ಪರೀಕ್ಷಾ ಸಾಧನವನ್ನೂ ಹೊಂದಿದ್ದು, ಕೊರೊನಾ ವೈರಾಣು ಮತ್ತು ಸಾರ್ಸ್ ಸಿಒವಿ-2 ಗಳನ್ನು ತ್ವರಿತವಾಗಿ ಪತ್ತೆ ಮಾಡಲಾಗುವುದು.
ಈ ಹಿಂದೆ ಇದ್ದ ಸಂಚಾರಿ ಪ್ರಯೋಗಾಲಯಕ್ಕಿಂತ ಇದು ಹೆಚ್ಚು ಸುಧಾರಿತವಾದುದಾಗಿದ್ದು, 20 ಅಡಿಯಷ್ಟು ವಿಸ್ತೀರ್ಣದ ಭಾರತ್ ಬೆನ್ಜ್ ಚಾಸೀಸ್ ಬಳಸಿ ಪ್ರಯೋಗಾಲಯವನ್ನು ನಿರ್ಮಿಸಲಾಗಿದೆ. ಸ್ಯಾಂಪಲ್ ಮತ್ತು ಕಿಟ್ಗಳ ಸಂಗ್ರಹ, ಬಯೋ ಮೆಡಿಕಲ್ ತ್ಯಾಜ್ಯ ನಿರ್ವಹಣೆ, ಪ್ರಧಾನ ಮಿಶ್ರಣ ತಯಾರಿಕೆಯಂತಹ ವ್ಯವಸ್ಥೆ ಇದರಲ್ಲಿದೆ ಎಂದು ತಿಳಿದು ಬಂದಿದೆ.