ಕೋಲ್ಕತ್ತಾ, ಫೆ.20 (DaijiworldNews/PY): ಕೊಕೆನ್ ಸಾಗಾಟ ಆರೋಪದ ಮೇಲೆ ಬಿಜೆಪಿ ಯುವ ಮೋರ್ಚಾ ನಾಯಕಿ ಪಮೇಲಾ ಗೋಸ್ವಾಮಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.

"ಪಮೇಲಾ ಗೋಸ್ವಾಮಿ ಅವರ ಕೈಚೀಲ, ಕಾರಿನ ಇತರ ಭಾಗಗಳಿಂದ 100 ಗ್ರಾಂ ಕೊಕೇನ್ ವಶಪಡಿಸಿಕೊಳ್ಳಲಾಗಿದ್ದು, ಅವರೊಂದಿಗೆ ಕಾರಿನಲ್ಲಿದ್ದ ಅವರ ಸ್ನೇಹಿತ ಪ್ರಬೀರ್ ಕುಮಾರ್ ಅವರನ್ನು ಬಂಧಿಸಲಾಗಿದೆ" ಎಂದು ಪೊಲೀಸರು ತಿಳಿಸಿದ್ದಾರೆ.
ಗೋಸ್ವಾಮಿ ಅವರನ್ನು ಕೊಕೆನ್ ಸಹಿತ ದಕ್ಷಿಣ ಕೋಲ್ಕತ್ತಾದ ನ್ಯೂ ಅಲಿಪೋರ್ ಪ್ರದೇಶದಿಂದ ಬಂಧಿಸಲಾಗಿದೆ.
ಗೋಸ್ವಾಮಿ ಅವರು ಸ್ವಲ್ಪ ಸಮಯದಿಂದ ಡ್ರಗ್ ಕಳ್ಳಸಾಗಣೆಯಲ್ಲಿ ತೊಡಗಿಕೊಂಡಿದ್ದರು. ಡ್ರಗ್ ಪೂರೈಕೆದಾರ ಪ್ರಬೀರ್ನೊಂದಿಗೆ ಡ್ರಗ್ಸ್ ಅನ್ನು ಖರೀದಿದಾರರಿಗೆ ನೀಡಲು ನ್ಯೂ ಅಲಿಪೋರ್ ಪ್ರದೇಶಕ್ಕೆ ಬರುವ ವಿಚಾರದ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು ಎಂದು ಪೊಲೀಸ್ ಅಧಿಕಾರಿಯೋರ್ವರು ಹೇಳಿದ್ದಾರೆ.
"ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಗೋಸ್ವಾಮಿ ಅವರು ಡ್ರಗ್ಸ್ ದಂದೆಯಲ್ಲಿ ಶಾಮೀಲಾಗಿದ್ದಾರೆಯೇ ಎನ್ನುವ ಬಗ್ಗೆ ತಿಳಿಯಲು ಪ್ರಯತ್ನಿಸುತ್ತಿದ್ದೇವೆ" ಎಂದಿದ್ದಾರೆ.
"ಯುವ ನಾಯಕಿ ತಪ್ಪು ಮಾಡಿದ್ದು ನಿಜವಾದಲ್ಲಿ ಕಾನೂನು ಕ್ರಮ ಕೈಗೊಳ್ಳಲಿ" ಎಂದು ಪಕ್ಷ ಹೇಳಿದೆ.
"ಈ ಹಿಂದೆ ಶಸ್ತ್ರಾಸ್ತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಲವು ಬಿಜೆಪಿ ನಾಯಕರನ್ನು ಹೆಸರಿಸಿದ್ದನ್ನು ನೋಡಿದ್ದೇವೆ. ಈ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಪಮೇಲಾ ಅವರು ಯುವತಿ. ಅವರು ತಪ್ಪು ಮಾಡಿದ್ದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಲಿ" ಎಂದು ಬಿಜೆಪಿ ಸಂಸದೆ ಲಾಕೆಟ್ ಚಟರ್ಜಿ ತಿಳಿಸಿದ್ದಾರೆ.