ಬೆಂಗಳೂರು, ಫೆ.20 (DaijiworldNews/PY): ಮಂಗಳೂರಿನಲ್ಲಿ ಪಿಎಫ್ಐ ಮುಖಂಡರು ನೀಡಿರುವ ಹೇಳಿಕೆ ದೇಶ ವಿರೋಧಿ ಮತ್ತು ಅಸಂವಿಧಾನಿಕ ಎಂದು ಹೇಳಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಂಘಟನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿರುವುದಾಗಿ ಹೇಳಿದ್ದಾರೆ.

ಉಳ್ಳಾಲದಲ್ಲಿ ಯುನಿಟಿ ಮಾರ್ಚ್ನಲ್ಲಿ ಪಿಎಫ್ಐನ ಪ್ರಧಾನ ಕಾರ್ಯದರ್ಶಿ ಅನಿಸ್ ಅಹಮದ್ ಮಾಡಿರುವ ಭಾಷಣಕ್ಕೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವರು, "ದೇಶಭಕ್ತಿಯ ಪ್ರತೀಕವಾದ ಆರ್ಎಸ್ಎಸ್ನ ಸಮಗ್ರತೆಯನ್ನು ಪಿಎಫ್ಐ ಹೇಗೆ ಪ್ರಶ್ನಿಸುತ್ತದೆ" ಎಂದು ಕೇಳಿದ್ದಾರೆ.
"ಪಿಎಫ್ಐ ನಾಯಕ ಮಾತನಾಡಿದ್ದು, ಖಂಡಿತವಾಗಿಯೂ ದೇಶ ವಿರೋಧಿ ಹಾಗೂ ಅಸಂವಿಧಾನಿಕ" ಮಾತುಗಳು ಎಂದಿದ್ದಾರೆ.
"ಅವರು ಮಾಡಿದ ಭಾಷಣದಲ್ಲಿ ಪಿಎಫ್ಐನ ಉದ್ದೇಶಗಳು ಏನು ಎನ್ನುವುದು ಸ್ಪಷ್ಟವಾಗಿವೆ. ದೇಶ ವಿರೋಧಿ ಹೇಳಿಕೆ ನೀಡಿರುವ ಪಿಎಫ್ಐ ವಿರುದ್ದ ಕ್ರಮ ಕೈಗೊಳ್ಳುವಂತೆ ಸೂಚಿಸುತ್ತೇನೆ" ಎಂದು ಹೇಳಿದ್ದಾರೆ.
ಉಳ್ಳಾಲದಲ್ಲಿ ಮಾತನಾಡಿದ ಪಿಎಫ್ಐ ಪ್ರಧಾನ ಕಾರ್ಯದರ್ಶಿ ಅನಿಸ್ ಅಹಮದ್, "ಅದು ರಾಮ ಮಂದಿರವಲ್ಲ, ಆರ್ಎಸ್ಎಸ್ ಮಂದಿರ. ಅದಕ್ಕೆ ಒಂದೇ ಒಂದು ಪೈಸೆ ಕೂಡಾ ನೀಡಬೇಡಿ" ಎಂದಿದ್ದರು.
"ಆರ್ಎಸ್ಎಸ್ ಭಾರತದ ನಿಜವಾದ ಶತ್ರು ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಆರ್ಎಸ್ಎಸ್ ಕ್ಯಾನ್ಸರ್ಗಿಂತ ಅಪಾಯಕಾರಿ" ಎಂದು ಹೇಳಿದ್ದರು.
"ಆರ್ಎಸ್ಎಸ್ ಒಂದು ಮಾರಕ ವೈರಸ್ ಆಗಿದೆ. ಇದಕ್ಕೆ ಇನ್ನೂ ಲಸಿಕೆ ಇಲ್ಲ. ಈ ದೇಶದಲ್ಲಿ ಹಿಂದೂ ಹಾಗೂ ಮುಸ್ಲಿಂ ನಡುವೆ ಸಮಸ್ಯೆ ಇಲ್ಲ. ಆದರೆ, ಆರ್ಎಸ್ಎಸ್ ಹಾಗೂ ಮುಸ್ಲಿಂ ನಡುವೆ ಸಮಸ್ಯೆ ಇದೆ" ಎಂದಿದ್ದರು.
"ದೇಶದಲ್ಲಿ ಶಾಂತಿ ಸ್ಥಾಪನೆಗಾಗಿ ಬಾಬ್ರಿ ಮಸೀದಿ ಜಾಗವನ್ನು ಬಿಟ್ಟುಕೊಡಿ ಎಂದು ಕೇಳಿದ್ದರು. ಆ ಜಾಗವನ್ನು ಬಿಟ್ಟು ಕೊಟ್ಟಾಗಿದೆ. ಆದರೆ, ದೇಶದಲ್ಲಿ ಶಾಂತಿ ಸ್ಥಾಪನೆಯಾಯಿತೇ?. ಇನ್ನೂ ಕೂಡಾ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ. ನಮ್ಮದು ಹಿಂದೂ ವಿರೋಧಿ ಸಂಘಟನೆಯಲ್ಲ. ಆರ್ಎಸ್ಎಸ್ ಹಿಂದೂ ವಿರೋಧಿ ಸಂಘಟನೆ" ಎಂದು ಹೇಳಿದ್ದರು.