ತಿರುವನಂತಪುರ, ಫೆ.20 (DaijiworldNews/MB) : ಮೆಟ್ರೊ ಮ್ಯಾನ್ ಖ್ಯಾತಿಯ ಇ. ಶ್ರೀಧರನ್, ಅವರು 'ಲವ್ ಜಿಹಾದ್' ವಿಚಾರದಲ್ಲಿ ಬಿಜೆಪಿಗೆ ಬೆಂಬಲ ಸೂಚಿಸಿದ್ದು, ''ಕೇರಳದಲ್ಲಿ ಇದು ನಡೆಯುತ್ತಿದೆ'' ಎಂದು ಆರೋಪಿಸಿದ್ದಾರೆ.

''ಕೇರಳದಲ್ಲಿ ಹಿಂದೂ ಹಾಗೂ ಕ್ರೈಸ್ತ ಹುಡುಗಿಯರನ್ನು ಮೋಸದಿಂದ ಮತಾಂತರ ಮಾಡಲಾಗುತ್ತಿದೆ. ಬಿಜೆಪಿಯನ್ನು ದೇಶದಲ್ಲಿ ಕೋಮುವಾದ ಪಕ್ಷವಾಗಿ ಬಿಂಬಿಸಲಾಗುತ್ತಿದೆ. ಆದರೆ ಈ ಕೇಸರಿ ಪಕ್ಷವನ್ನು ನಾನು ದೇಶಪ್ರೇಮಿ ಪಕ್ಷವಾಗಿ ಕಾಣುತ್ತೇನೆ'' ಎಂದು ಹೇಳಿದರು.
''ಬಿಜೆಪಿ ಕೋಮುವಾದಿ ಪಕ್ಷವಲ್ಲ, ರಾಷ್ಟ್ರ ಪ್ರೇಮಿಗಳು ಇರುವ ಪಕ್ಷ ಬಿಜೆಪಿ. ಈ ಪಕ್ಷವು ಎಲ್ಲ ಸಮುದಾಯಗಳನ್ನು ಒಪ್ಪಿಕೊಳ್ಳುತ್ತದೆ. ಮೋದಿ ಸರ್ಕಾರದ ನೀತಿಯೇ ಅದು, ಮೋದಿಯವರು ಮಾತನಾಡುವ ರೀತಿಯಲ್ಲೇ ಅದು ತಿಳಿಯುತ್ತದೆ'' ಎಂದರು.
''ಬಿಜೆಪಿ ಯಾವ ಸಂದರ್ಭದಲ್ಲೂ ಯಾವುದೇ ಧರ್ಮದ ವಿರುದ್ದ ಆಕ್ರಮಣ ಮಾಡುವುದನ್ನು ನಾನು ಎಂದಿಗೂ ನೋಡಿಲ್ಲ'' ಎಂದು ಕೂಡಾ ಹೇಳಿದರು.
ಗುರುವಾರದಂದು ಇ. ಶ್ರೀಧರನ್ ಅವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳುವುದಾಗಿ ಹೇಳಿದ್ದರು.