ಬೆಂಗಳೂರು, ಫೆ.20 (DaijiworldNews/PY): ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಅವರನ್ನು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಫೆ.22ರಂದು ದೆಹಲಿಯಲ್ಲಿ ಭೇಟಿ ಮಾಡಲಿದ್ದು, ರಾಜ್ಯದ ಹಲವು ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಲಿದ್ದಾರೆ.

ಫೆ.21ರಂದು ರಮೇಶ ಜಾರಕಿಹೊಳಿ ಅವರು, ದೆಹಲಿಯ ಕರ್ನಾಟಕ ಭವನದಲ್ಲಿ ಕಾವೇರಿ, ಕೃಷ್ಣಾ, ಮಹಾದಾಯಿ ಸೇರಿದಂತೆ ಅಂತರ್ರಾಜ್ಯ ಜಲವಿವಾದಗಳ ವಿಚಾರದ ಬಗ್ಗೆ ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಇರುವ ಪ್ರಕರಣಗಳಿಗೆ ಕುರಿತಂತೆ ಕಾನೂನು ತಜ್ಞರು ಹಾಗೂ ತಾಂತ್ರಿಕ ಸಲಹೆಗಾರರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಸಭೆಯಲ್ಲಿ ರಮೇಶ್ ಜಾರಕಿಹೊಳಿ ಅವರೊಂದಿಗೆ ನೀರಾವರಿ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಹಿರಿಯ ಅಧಿಕಾರಿಗಳು ಸೇರಿದಂತೆ ಕಾರ್ಯದರ್ಶಿ ಅನೀಲ್ ಕುಮಾರ್ ಹಾಗೂ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರ ಪಾಲ್ಗೊಳ್ಳಲಿದ್ದಾರೆ.