ಹಾಸನ, ಮಾ.09 (DaijiworldNews/PY): ಜಮೀನಿಗೆ ರಸ್ತೆ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ನಟ ಯಶ್ ಅವರ ತಂದೆ-ತಾಯಿ ಹಾಗೂ ಗ್ರಾಮಸ್ಥರ ಮಧ್ಯೆ ಗಲಾಟೆಯಾಗಿರುವ ಘಟನೆ ಹಾಸನ ಜಿಲ್ಲೆಯ ದುದ್ದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಯಶ್ ಅವರ ತಂದೆ ಅರುಣ್ ಕುಮಾರ್ ಹಾಗೂ ತಾಯಿ ಪುಷ್ಪಾ ಅವರು ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿರುವ ಸಂದರ್ಭ ಗ್ರಾಮಸ್ಥರು ಬಂದು ಇಲ್ಲಿ ಕೆಲಸ ಮಾಡಬೇಡಿ ಎಂದು ತಡೆ ನೀಡಿದ್ದಾರೆ ಎನ್ನಲಾಗಿದೆ. ಅಲ್ಲದೇ, ಗ್ರಾಮಸ್ಥರ ಹಾಗೂ ಯಶ್ ಅವರ ತಂದೆ-ತಾಯಿ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದೆ.
ಹಾಸನ ಜಿಲ್ಲೆಯ ದುದ್ದ ಬಳಿ ಇರುವ ತಿಮ್ಮೇನಹಳ್ಳಿಯಲ್ಲಿನ ಅರುಣ್ ಕುಮಾರ್ ಹಾಗೂ ಪುಷ್ಪ ಅವರು ಜಮೀನಿನಲ್ಲಿ ರಸ್ತೆ ನಿರ್ಮಾಣ ಮಾಡುವ ಸಂದರ್ಭ ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರು, ಇಲ್ಲಿ ರಸ್ತೆ ನಿರ್ಮಾಣ ಮಾಡಬೇಡಿ ಎಂದು ಗಲಾಟೆ ಮಾಡಿದ್ದು, ಈ ಸಂಬಂಧ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮಧ್ಯಸ್ಥಿಕೆ ವಹಿಸಿದ ಬಳಿಕ ಪರಿಸ್ಥಿತಿ ಶಾಂತವಾಗಿದೆ ಎನ್ನಲಾಗಿದೆ.