ಬೆಂಗಳೂರು, ಮಾ.13 (DaijiworldNews/MB): ಬಿಜೆಪಿಯು ಅಧ್ಯಕ್ಷಗಾದಿಗೆ ಬಲಿಷ್ಠರನ್ನು ಹುಡುಕಾಡುತ್ತಿದೆಯೇ ಎಂಬ ವರದಿಗಳು ಆಗುತ್ತಿದಂತೆಯೇ ಈ ವಿಚಾರಕ್ಕೆ ಸಂಬಂಧಿಸಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಟ್ವೀಟ್ ವಾರ್ ಆರಂಭವಾಗಿದೆ.

''ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಕಾಮಿಡಿ ಕಿಂಗ್ ನಳಿನ್ ಅವರಿಗೆ ಬೆನ್ನುಮೂಳೆ ಇಲ್ಲ ಎನ್ನುವುದನ್ನ ಬಿಜೆಪಿ ಅರ್ಥೈಸಿಕೊಂಡಂತಿದೆ. ಬಿಎಸ್ವೈ ಮುಕ್ತ ಬಿಜೆಪಿ ಮಾಡುವ ಸಲುವಾಗಿ ಬಿಎಲ್ ಸಂತೋಷ್ ನೇಮಿಸಿಕೊಂಡ ಕೀಲಿಗೊಂಬೆ ಕಟೀಲ್. ತಮ್ಮ ದುರಾಡಳಿತದಿಂದ ಮುಂದೆ ಸೋಲು ಖಚಿತ ಎಂದು ಮನಗಂಡಿರುವ ಬಿಜೆಪಿ ಏನೇನೋ ಸರ್ಕಸ್ ನಡೆಸುತ್ತಿದೆ'' ಎಂದು ಬಿಜೆಪಿಯು ಅಧ್ಯಕ್ಷಗಾದಿಗೆ ಬಲಿಷ್ಠರನ್ನು ಹುಡುಕಾಡುತ್ತಿದೆಯೇ ಎಂಬ ವರದಿಯೊಂದನ್ನು ಉಲ್ಲೇಖಿಸಿ ಕಾಂಗ್ರೆಸ್ ಟ್ವೀಟ್ ಮಾಡಿದೆ.
ಈ ಟ್ವೀಟ್ಗೆ ಟ್ವೀಟ್ ಮೂಲಕವೇ ತಿರುಗೇಟು ನೀಡಿದ ಬಿಜೆಪಿ, ''ಡಿಯರ್, ಕಾಂಗ್ರೆಸಿಗರೇ, ತಿರುಕನ ಕನಸು ಕಾಣಬೇಡಿ. ನಿಮ್ಮ ಪಕ್ಷ ಕೋಮಾದಲ್ಲಿದೆ. ಅಧ್ಯಕ್ಷ ಸ್ಥಾನ ಗಾಂಧಿ ಕುಟುಂಬದ ಸುತ್ತಲೂ ಗಿರಕಿ ಹೊಡೆಯುತ್ತಿದೆ. ಸಮರ್ಥ ಪಕ್ಷ ಸಂಘಟನೆಯಿಂದ ಈ ಹಿಂದೆ ನಡೆದ ಚುನಾವಣೆ, ಉಪಚುನಾವಣೆಗಳಲ್ಲಿ ನಮ್ಮ ರಾಜ್ಯಾಧ್ಯಕ್ಷರಾದ ಶ್ರೀ ನಳಿನ್ ಕುಮಾರ್ ಕಟೀಲ್ ಅವರು ಕಾಂಗ್ರೆಸ್ ಪಕ್ಷದ ಬೆನ್ನುಮೂಳೆ ಮುರಿದಿದ್ದಾರೆ'' ಎಂದು ಹೇಳಿದೆ.
ಆದರೆ ಕಾಂಗ್ರೆಸ್, ಬಿಜೆಪಿ ಟ್ವೀಟ್ ವಾರ್ ಇಷ್ಟಕ್ಕೆ ನಿಲ್ಲದೆ ಕಾಂಗ್ರೆಸ್ ಮತ್ತೆ ಟ್ವೀಟ್ ಮೂಲಕವೇ ಬಿಜೆಪಿಗೆ ಪ್ರತಿಕ್ರಿಯಿಸಿದೆ. ''ಯತ್ನಾಳ್ರನ್ನು ನಿಗ್ರಹಿಸಲಾಗದ್ದು, ಜಾರಕಿಹೊಳಿಯವರನ್ನು ಅಮಾನತುಗೊಳಿಸದಿರುವುದು, ಹೆಗಲು ಮುಟ್ಟಿಕೊಂಡು ತಮ್ಮ ಹುಳುಕು ಹೊರಬರದಂತೆ ತಡೆಯಾಜ್ಞೆ ತಂದವರನ್ನ ಇನ್ನೂ ಪಕ್ಷದಲ್ಲಿಟ್ಟುಕೊಂಡಿದ್ದು, ದಲಿತ ಮಹಿಳೆಗೆ ಹಲ್ಲೆ ಮಾಡಿದ ಸಿದ್ದು ಸವದಿ ವಿರುದ್ಧ ಕ್ರಮವಿಲ್ಲದಿರುವುದು, ನಳಿನ್ ಬೆನ್ನುಮೂಳೆ ಟೊಳ್ಳು ಎನ್ನುವುದಕ್ಕೆ ನಿದರ್ಶನ'' ಎಂದು ಟಾಂಗ್ ನೀಡಿದೆ.