ಡೆಹರಾಡೂನ್, ಮಾ.18 (DaijiworldNews/PY): ಮುಂದಕ್ಕೆ ಚಲಿಸಬೇಕಿದ್ದ ಶತಾಬ್ದಿ ಎಕ್ಸ್ಪ್ರೆಸ್ ರೈಲು ತಾಂತ್ರಿಕ ದೋಷದ ಕಾರಣ 35ಕಿ.ಮೀ ಹಿಂದಕ್ಕೆ ಚಲಿಸಿದ ಘಟನೆ ಉತ್ತರಾಖಂಡದಲ್ಲಿ ನಡೆದಿದೆ.

ಪೂರ್ಣಗಿರಿ ಜನಶತಾಬ್ದಿ ಎಕ್ಸ್ ಪ್ರೆಸ್ ರೈಲು ದೆಹಲಿಯಿಂದ ತನಕ್ಪುರಕ್ಕೆ ತೆರಳುತ್ತಿದ್ದು, ಈ ವೇಳೆ ತಾಂತ್ರಿಕ ದೋಷದಿಂದ 35ಕಿ.ಮೀ ಹಿಂದಕ್ಕೆ ಚಲಿಸಿದೆ. ಘಟನೆಯಿಂದ ಯಾವುದೇ ಆಪಘಾತ ಸಂಭವಿಸಿಲ್ಲ. ರೈಲಿನಲ್ಲಿ ಸುಮಾರು 60-70 ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಅವರೆಲ್ಲರೂ ಅನಾಹುತದಿಂದ ಪಾರಾಗಿದ್ದಾರೆ. ಸದ್ಯ ಎಲ್ಲಾ ಪ್ರಯಾಣಿಕರನ್ನು ಚಕ್ರಪುರಕ್ಕೆ ಬಸ್ ಮೂಲಕ ಕರೆದೊಯ್ಯಲಾಗಿದೆ.
ಈ ಬಗ್ಗೆ ರೈಲ್ವೆ ಇಲಾಖೆ ಟ್ವೀಟ್ ಮಾಡಿದ್ದು, "2021ರ ಮಾರ್ಚ್ 17ರಂದು ಖತಿಮಾ-ತನಕ್ಪುರ ವಿಭಾಗದಲ್ಲಿ ಜಾನುವಾರುಗಳು ರೈಲಿನ ಮಧ್ಯೆ ಓಡಿಹೋದ ಕಾರಣ ಈ ಘಟನೆ ನಡೆದಿದೆ. ರೈಲನ್ನು ಖತಿಮಾದಲ್ಲಿ ನಿಲ್ಲಿಸಲಾಯಿತು. ಇದಾದ ಬಳಿಕ ರೈಲಿನಲ್ಲಿದ್ದ ಪ್ರಯಾಣಿಕರನ್ನು ಸುರಕ್ಷಿತವಾಗಿ ತನಕ್ಪುರಕ್ಕೆ ಕರೆದೊಯ್ಯಲಾಗಿದೆ. ಕೆಲಸದಿಂದ ಲೊಕೊ ಪೈಲಟ್ ಹಾಗೂ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ" ಎಂದು ತಿಳಿಸಿದೆ.
"ಪ್ರಾಣಿಗಳ ಜೀವ ಕಾಪಾಡುವ ಸಲುವಾಗಿ ತಕ್ಷಣ ಬ್ರೇಕ್ ಹಾಕಿದ ಸಂದರ್ಭ ಮುಂದಕ್ಕೆ ಚಲಿಸುತ್ತಿದ್ದ ರೈಲು ತಾಂತ್ರಿ ದೋಷದ ಕಾರಣ ಹಿಂದಕ್ಕೆ ಚಲಿಸಿದೆ. ಈ ಕಾರಣದಿಂದ ರೈಲನ್ನು ಚಕರ್ಪುರದಲ್ಲಿ ನಿಲ್ಲಿಸಲಾಯಿತು" ಎಂದು ಚಂಪಾವತ್ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ವರ ಸಿಂಗ್ ತಿಳಿಸಿದ್ದಾರೆ.
ಈ ವಾರದಲ್ಲಿ ಉತ್ತರಾಖಂಡದಲ್ಲಿ ಸಂಭವಿಸಿದ ಎರಡನೇ ಘಟನೆಯಾಗಿದೆ. ಶನಿವಾರದಂದು ದೆಹಲಿ-ಡೆಹ್ರಾಡೂನ್ ಎಕ್ಸ್ಪ್ರೆಸ್ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಆದರೆ, ಅದೃಷ್ಟವಶಾತ್ ಆ ಘಟನೆಯನ್ನು ಯಾವುದೇ ಪ್ರಯಾಣಿಕರಿಗೆ ಪ್ರಾಣ ಹಾನಿಯಾಗಿಲ್ಲ.