ಡೆಹ್ರಾಡೂನ್, ಮಾ.19 (DaijiworldNews/HR): ಉತ್ತರಖಂಡದ ನೂತನ ಮುಖ್ಯಮಂತ್ರಿ ತೀರತ್ ಸಿಂಗ್ ರಾವತ್ ಹರಿದ ಜೀನ್ಸ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಮಹಿಳೆಯರು, ಹರಿದ ಜೀನ್ಸ್ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ವಿನೂತನವಾಗಿ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ, ರಾವತ್ ಪತ್ನಿ ರಶ್ಮಿ ತ್ಯಾಗಿ ಸಮರ್ಥನೆಗಿಳಿದಿದ್ದಾರೆ.

ಈ ಕುರಿತು ಸಮರ್ಥಿಸಿಕೊಂಡಿರುವ ರಶ್ಮಿ ತ್ಯಾಗಿ, "ತಿರತ್ ಸಿಂಗ್ ರಾವತ್ ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಸಮಾಜ ಮತ್ತು ದೇಶದ ನಿರ್ಮಾಣದಲ್ಲಿ ಮಹಿಳೆಯರು ಮಹತ್ತರ ಪಾತ್ರವಹಿಸುತ್ತಾರೆ. ನಮ್ಮ ಸಾಂಸ್ಕೃತಿಕ ಪರಂಪರೆ, ನಮ್ಮ ಅಸ್ಮಿತೆ, ನಮ್ಮ ಉಡುಗೆ ಇವುಗಳನ್ನು ರಕ್ಷಿಸುವ ಜವಾಬ್ದಾರಿ ದೇಶದ ಮಹಿಳೆಯರದ್ದು ಎಂಬುದಾಗಿ ರಾವತ್ ಹೇಳಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ರಾವತ್, ಮಹಿಳೆಯರು ಹರಿದ ಜೀನ್ಸ್ ಧರಿಸಿ ಮಕ್ಕಳೊಂದಿಗೆ ಓಡಾಡುತ್ತಾರೆ. ಇವರು ಸಮಾಜಕ್ಕೆ ಯಾವ ಸಂದೇಶವನ್ನು ನೀಡುತ್ತಾರೆ ಎಂದು ಪ್ರಶ್ನಿಸಿದ್ದರು. ರಾವತ್ ಅವರ ಹೇಳಿಕೆಯನ್ನು ಖಂಡಿಸಿ ವಿಪಕ್ಷ ಪ್ರತಿಭಟನೆಯನ್ನು ನಡೆಸಿತ್ತು.
ಇನ್ನಿ ರಾವತ್ ಹೇಳಿಕೆಗೆ ಪ್ರತಿಕ್ರಿಯಿಸಿ ಕಾಂಗ್ರೆಸ್ ನ ಹಿರಿಯ ನಾಯಕ ಕಪಿಲ್ ಸಿಬಲ್, ಈ ಹೇಳಿಕೆ ಆಘಾತವನ್ನುಂಟುಮಾಡಿದೆ ಎಂದು ಹೇಳಿದ್ದು, ರಾವತ್ ಹೇಳಿಕೆ ಅವಮಾನಕರ. ತಕ್ಷಣವೇ ಅವರು ಮಹಿಳೆಯರ ಕ್ಷಮೆ ಕೇಳಬೇಕು ಎಂದು ಉತ್ತರಾಖಂಡದ ಕಾಂಗ್ರೆಸ್ ಮುಖ್ಯಸ್ಥ ಪ್ರೀತಂ ಸಿಂಗ್ ಒತ್ತಾಯಿಸಿದ್ದಾರೆ.