ಭುವನೇಶ್ವರ್,ಮಾ.19 (DaijiworldNews/HR): ಮದುವೆಯಾಗುತ್ತೇನೆ ಎಂದು ನಂಬಿಸಿ ವಂಚಿಸಿ ಜೈಲು ಸೇರಿದ್ದ ಆರೋಪಿಗೆ ಜೈಲಿನಲ್ಲೇ ಸಂತ್ರಸ್ತೆ ಜತೆ ಮದುವೆ ಮಾಡಿಸಿರುವ ಅಪರೂಪದ ಘಟನೆ ಒಡಿಶಾದ ಕಟಕ್ ಜಿಲ್ಲೆಯ ಚೌದ್ವಾರ ಸರ್ಕಲ್ ಜೈಲಿನಲ್ಲಿ ನಡೆದಿದೆ.

ಸಾಂಧರ್ಭಿಕ ಚಿತ್ರ
ಆರೋಪಿ ನರಸಿಂಗ್ ದಾಸ್ ಮತ್ತು ಸಂತ್ರಸ್ತೆ ಪೂಜಾ ದಾಸ್ಗೆ ವೇದಿಕ ಸಂಪ್ರದಾಯದ ಪ್ರಕಾರ ಜೈಲಿನಲ್ಲಿ ಎರಡು ಕುಟುಂಬದ ಸಮ್ಮುಖದಲ್ಲೇ ಸಿಬ್ಬಂದಿ ಮದುವೆ ಮಾಡಿಸಿದ್ದಾರೆ ಎನ್ನಲಾಗಿದೆ.
ಆರೋಪಿಯು ಪೂಜಾ ಎಂಬಾಕೆಯನ್ನು ಪ್ರೀತಿಸಿದ್ದು, ಬಳಿಕ ಆಕೆಗೆ ಮೋಸ ಮಾಡಿ ಮತ್ತೊಬ್ಬಳೊಂದಿಗೆ ಮದುವೆ ಆಗಲು ಯೋಜನೆ ರೂಪಿಸಿದ್ದ. ಸಂತ್ರಸ್ತೆಯ ಕುಟುಂಬಕ್ಕೆ ಈ ಬಗ್ಗೆ ಗೊತ್ತಾದಾಗ ಅವರು ಪೊಲೀಸ್ ಠಾಣೆಯ ಮೆಟ್ಟಿಲೇರಿ ಪ್ರಕರಣ ದಾಖಲಿಸಿದ್ದರು.
ಇನ್ನು ದೂರಿನ ಆಧಾರದ ಮೇಲೆ ನರಸಿಂಗ್ನನ್ನು ಪೊಲೀಸರು 2019ರ ಸೆಪ್ಟೆಂಬರ್ 28ರಂದು ಪೊಕ್ಸೊ ಕಾಯ್ದೆ ಅಡಿ ಬಂಧಿಸಿದ್ದರು. ಆದರೆ ಈ ವೇಳೆ ಸಂತ್ರಸ್ತೆ ಅಪ್ರಾಪ್ತೆಯಾಗಿದ್ದಳು. ಬಳಿಕ ಜೈಲಿನಲ್ಲಿರುವಾಗ ಮದುವೆಗೆ ಆತ ಒಪ್ಪಿಗೆ ನೀಡಿದ್ದು, ಅದರಂತೆಯೇ ಇಂದು ಮದುವೆ ನಡೆದಿದೆ. ನಾವಿಬ್ಬರು ಒಳ್ಳೆಯ ಜೀವನ ನಡೆಸುತ್ತೇವೆಂಬ ಭರವಸೆ ಇದೆ ಸಂತ್ರಸ್ತೆ ಪೂಜಾ ಹೇಳಿದ್ದಾರೆ.