ನವದೆಹಲಿ, ಮಾ.19 (DaijiworldNews/PY): ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಕೊರೊನಾ ಸೋಂಕು ಹೆಚ್ಚಾಗಿದ್ದ ಸಂದರ್ಭ 100ನೇ ವರ್ಷಕ್ಕೆ ಕಾಲಿಟ್ಟ ಇಂದ್ ಮೂಲದ ಕಮಲಾ ದಾಸ್ ಅವರು ಕೊರೊನಾ ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದಾರೆ.

ಸಾಂದರ್ಭಿಕ ಚಿತ್ರ
ದಿ.ಮೇಜರ್ ಜನರಲ್ (ನಿವೃತ್ತ) ಚಾಂದ್ ಎನ್. ದಾಸ್ ಅವರ ಪತ್ನಿ ಕಮಲಾ ದಾಸ್ ಅವರು 1920ರ ಸೆಪ್ಟೆಂಬರ್ 3ರಂದು ಜನಿಸಿದ್ದಾರೆ. ಕೊರೊನಾ ಲಸಿಕೆಯ ಮೊದಲ ಡೋಸ್ ಪಡೆದುಕೊಂಡ ಅವರು, "ಸಂಪೂರ್ಣವಾಗಿ ನೋವುರಹಿತ" ಎಂದು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಕಮಲಾ ದಾಸ್ ಅವರ ಕಿರಿಯ ಮಗಳು ಜ್ಯೋತಿಕಾ ಸಿಕಂದ್, "ಕೊರೊನಾ ಸಂದರ್ಭ ನನ್ನ ತಾಯಿ 100ನೇ ವರ್ಷಕ್ಕೆ ಕಾಲಿಟ್ಟರು. ನಾವು ಸೆಪ್ಟೆಂಬರ್
2-4ರವರೆಗೆ ಆಚರಣೆ ಮಾಡಿದ್ದೇವೆ. ಆ ಸಂದರ್ಭ ಸಮಾರಂಭ ಮಾಡಲು ಅವಕಾಶವಿರಲಿಲ್ಲ. ನನ್ನ ಒಡಹುಟ್ಟಿದವರು, ತಾಯಿಗೆ ಕೊರೊನಾ ಸೋಂಕು ತಗುಲಬಹುದು ಎಂಬ ಆತಂಕದಲ್ಲಿದ್ದರು. ಆದರೆ, ಆಕೆ ಉತ್ತಮ ಜೀವನ ನಡೆಸಿದ್ದಾಳೆ. ಪ್ರತಿಯೊಬ್ಬರೂ ತಮ್ಮ 100ನೇ ವರ್ಷದ ಹುಟ್ಟುಹಬ್ಬವನ್ನು ನೋಡಲು ಆಗುವುದಿಲ್ಲ. ಹಾಗಾಗಿ ನಾವು ಅವರ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದೆವು" ಎಂದು ತಿಳಿಸಿದ್ದಾರೆ.
ದಕ್ಷಿಣ ದೆಹಲಿಯ ನಿವಾಸಿಯಾದ ಕಮಲಾದಾಸ್ ಅವರು ಇಲ್ಲಿನ ಬಿಎಲ್ಕೆ ಆಸ್ಪತ್ರೆಯಲ್ಲಿ ಲಸಿಕೆ ಹಾಕಿಸಿಕೊಂಡಿದ್ದಾರೆ.
"ಕೊರೊನಾ ಸಂದರ್ಭ ಆಕೆಗೆ ನಾವು ಸಾಮಾನ್ಯ ಜೀವನವನ್ನು ನಡೆಸುವಂತ ಅವಕಾಶ ನೀಡಿದೆವು. ಈಗ ಆಕೆ ಚೆನ್ನಾಗಿದ್ದಾಳೆ. ಆಕೆ ಕೊರೊನಾ ಲಸಿಕೆ ಪಡೆದುಕೊಂಡಿದ್ದಾಳೆ" ಎಂದು 72 ವರ್ಷದ ಸಿಕಂದ್ ಹೇಳಿದ್ದಾರೆ.
"ಲಸಿಕೆ ನೋವು ರಹಿತವಾಗಿದೆ ಎಂದು ಆಕೆ ನನಗೆ ಹೇಳಿದಳು. ಲಸಿಕೆ ಯಾವ ಕೈಗೆ ನೀಡಲಾಗಿದೆ ಎಂದು ನನಗೆ ತಿಳಿದಿಲ್ಲ ಎಂದು ನನಗೆ ಹೇಳಿದರು" ಎಂದು ಅವರ ಪುತ್ರಿ ತಿಳಿಸಿದ್ದಾರೆ.