ಬೆಂಗಳೂರು, ಮಾ.19 (DaijiworldNews/HR): ಸದನ ಸಮಿತಿ ರಚನೆಗೆ ರಾಜ್ಯ ಸರ್ಕಾರ ನಿರಾಕರಿಸಿದ್ದು, ಜೆಡಿಎಸ್ ಧರಣಿಯಿಂದ ಸದನದಲ್ಲಿ ಕೋಲಾಹಲ ಮುಂದುವರಿದಿದ್ದು,ಕಲಾಪವನ್ನು ಮತ್ತೆ ಸೋಮವಾರಕ್ಕೆ ಮುಂದೂಡಲಾಯಿತು.

ಸಂಧಾನ ಸಭೆಯ ಬಳಿಕ ಮತ್ತೆ ಕಲಾಪ ಪ್ರಾರಂಭವಾದಾಗ ಸ್ಪಷ್ಟನೆ ನೀಡಿದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್, "ನಮ್ಮ ಅವಧಿಯಲ್ಲಿ ಯಾವುದೇ ಲೋಪ ಆಗಿಲ್ಲ. 2002ರಲ್ಲಿ ಒಂದೇ ಬಾರಿಗೆ 300 ಕಾಲೇಜುಗಳಿಗೆ ಅನುಮತಿ ನೀಡಲಾಗಿತ್ತು. ಆಗ ಯಾರೂ ತನಿಖೆಗೆ ಆಗ್ರಹಿಸಿರಲಿಲ್ಲ. ಭ್ರಷ್ಟಾಚಾರ ನಡೆದಿರುವುದಕ್ಕೆ ದಾಖಲೆ ನೀಡಲಿ. ಲೋಪ ಎಲ್ಲಿ ಆಗಿದೆ ಎಂದು ಹೇಳಲಿ" ಎಂದರು.
ಜೆಡಿಎಸ್ನ ಮರಿತಿಬ್ಬೇಗೌಡ ಮಾತನಾಡಿ, "ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ 62 ಸಂಸ್ಥೆಗಳ ಅರ್ಜಿಗಳನ್ನು ಶಿಫಾರಸು ಮಾಡಿತ್ತು. ಹಣ ಕೊಟ್ಟ 45 ಸಂಸ್ಥೆಗಳಿಗೆ ಅನುಮತಿ ನೀಡಲಾಗಿದೆ. ದೊಡ್ಡ ಭ್ರಷ್ಟಾಚಾರ ನಡೆದಿದೆ" ಎಂದು ಆರೋಪಿಸಿದ್ದಾರೆ.
ಇನ್ನು ಮಾತಿಗೆ ಮಾತು ಬೆಳೆದು ಕೋಲಾಹಲ ಸೃಷ್ಟಿಯಾಗಿದ್ದು, ಸಭಾಧ್ಯಕ್ಷರ ಪೀಠದ ಎದುರು ಮರಿತಿಬ್ಬೇಗೌಡ ಅವರು ಏರು ದನಿಯಲ್ಲಿ ಮಾತನಾಡತೊಡಗಿದರು. ಬಿಜೆಪಿ ಸದಸ್ಯರು ಜೋರಾಗಿ ಪ್ರತ್ಯುತ್ತರ ನೀಡುತ್ತಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಕಾರಣದಿಂದ ಸಭಾಪತಿ ಕಲಾಪವನ್ನು ಸೋಮವಾರಕ್ಕೆ ಮುಂದೂಡಿದರು ಎನ್ನಲಾಗಿದೆ.