ಬೆಂಗಳೂರು, ಮಾ.19 (DaijiworldNews/HR): "ಖಾಸಗಿ ಶಾಲೆಯೊಂದರಲ್ಲಿ ಹೆಚ್ಚುವರಿ ಶುಲ್ಕ ಪಾವತಿಸಲು ಆಗದ ವಿದ್ಯಾರ್ಥಿಗಳನ್ನು ಪರೀಕ್ಷೆಯಿಂದ ಹೊರಗಿಟ್ಟಿರುವ ಮತ್ತು ಶ್ರೀರಂಗಪಟ್ಟಣ ತಾಲೂಕಿನ ಶಾಲೆಯಲ್ಲಿ ಶುಲ್ಕದ ವಿಚಾರದಲ್ಲಿ ನಡೆದ ಪ್ರಕರಣಗಳು ದುರದೃಷ್ಟಕರವಾಗಿದ್ದು, ಪದೇ ಪದೇ ಈ ರೀತಿಯ ಪ್ರಕರಣಗಳು ಮರುಕಳಿಸಿದರೆ ಇಲಾಖೆ ತನ್ನ ಪರಮಾಧಿಕಾರವನ್ನು ಚಲಾಯಿಸಬೇಕಾಗುತ್ತದೆಂಬುದನ್ನು ಶಾಲಾಡಳಿತ ಮಂಡಳಿಗಳು ತಿಳಿದುಕೊಳ್ಳಬೇಕೆಂದು" ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಎಚ್ಚರಿಸಿದ್ದಾರೆ.

ಈ ಕುರಿತು ಮಾತನಡಿದ ಅವರು, "ಸಾಮಾಜಿಕ ಸಂಕಷ್ಟದ ಪರಿಸ್ಥಿತಿಯಲ್ಲಿ ನಡೆಯುತ್ತಿರುವ ಇಂತಹ ಪ್ರಕರಣಗಳು ನಮ್ಮ ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನು ಕುಂದಿಸುವುದರೊಂದಿಗೆ ರಾಷ್ಟ್ರದ ಭವಿಷ್ಯದ ಹಿತದಷ್ಟಿಯಿಂದಲೂ ಒಳ್ಳೆಯ ಬೆಳವಣಿಗೆಯಲ್ಲ" ಎಂದರು.
ಇನ್ನು ಶಾಲಾಡಳಿತ ಮಂಡಳಿಗಳು ಮತ್ತು ಪೋಷಕರ ನಡುವಿನ ಇಂತಹ ಸಂಘರ್ಷಗಳು ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಇಂತಹ ಪ್ರಕರಣಗಳು ಮರುಕಳಿಸದಂತೆ ವರ್ತಿಸಬೇಕಾದ ಅಗತ್ಯವನ್ನು ನಾನು ಮತ್ತೆ ಮತ್ತೆ ಹೇಳಿದ್ದೇನೆ" ಎಂದಿದ್ದಾರೆ.
ಹೈಕೋರ್ಟ್ ಕೂಡಾ ಈ ಅತಿಸೂಕ್ಷ್ಮವಾದ ವಿಷಯವನ್ನು ಬಹಳ ನಾಜೂಕಿನಿಂದ ನಿರ್ವಹಿಸಬೇಕಾದ ಅಂಶವನ್ನು ಒತ್ತಿ ಹೇಳಿದ್ದು, ನಾಡಿನ ಎಲ್ಲ ಖಾಸಗಿ ಶಾಲಾ ಆಡಳಿತ ಮಂಡಳಿಗಳು ಮಕ್ಕಳ ಹಿತವನ್ನು ಗಮನದಲ್ಲಿಟ್ಟುಕೊಂಡು ಸಂವೇದನೆಯಿಂದ ವರ್ತಿಸಬೇಕು" ಎಂದು ಹೇಳಿದ್ದಾರೆ.