ತಿರುವನಂತಪುರಂ, ಮಾ.19 (DaijiworldNews/PY): ಕೇರಳದ ಶಬರಿಮಲೆಯಲ್ಲಿ ಉತ್ರಂ ಹಬ್ಬದ ಹಿನ್ನೆಲೆ ದೇವಸ್ಥಾನದ ಬಾಗಿಲು ತೆರೆಯಲಾಗಿದ್ದು, ಭಕ್ತರಿಗೆ ಮಾರ್ಚ್ 28ರವರೆಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

"ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ಕಡ್ಡಾಯವಾಗಿ ಕೊರೊನಾ ನೆಗೆಟಿವ್ ಸರ್ಟಿಫಿಕೇಟ್ ಅನ್ನು ಹೊಂದಿರಬೇಕು" ಎಂದು ವರದಿ ತಿಳಿಸಿದೆ.
"ಶಬರಿಮಲೆ ದೇವಾಲಯದ ಬಾಗಿಲು ತೆರೆಯುವ ಮುಖೇನ ಮತ್ತೆ ಮಹಿಳಾ ಭಕ್ತರ ಪ್ರವೇಶದ ವಿಚಾರ ಮುನ್ನೆಲೆಗೆ ಬಂದಿದೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಹಾಗೂ ಬಿಜೆಪಿ ನೇತೃತ್ವದ ಎನ್ಡಿಎಫ್ ಈಗಾಗಲೇ ಈ ವಿಚಾರವನ್ನು ಕೇರಳ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಬಳಕೆ ಮಾಡಿಕೊಂಡಿದೆ" ಎಂದು ವರದಿ ತಿಳಿಸಿದೆ.
"ಶಬರಿಮಲೆಗೆ ಮಹಿಳೆಯರ ಪ್ರವೃಶ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ನ ಅಂತಿಮ ತೀರ್ಮಾನ ಪ್ರಕಟವಾದ ಬಳಿಕ ರಾಜ್ಯ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ" ಎಂದು ಗುರುವಾರ ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದರು.
ಸುಪ್ರೀಂ ಕೋರ್ಟ್ಗೆ ಶಬರಿಮಲೆ ವಿಚಾರಕ್ಕೆ ಸಂಬಂಧಿಸಿದಂತೆ ಹೊಸ ಅಫಿಡವಿತ್ ಸಲ್ಲಿಸಲಾಗಿದೆಯೇ ಎನ್ನುವ ಬಗ್ಗೆ ಎಲ್ಡಿಎಫ್ ತಿಳಿಸಬೇಕು ಎಂದು ಕಾಂಗ್ರೆಸ್ ಹಾಗೂ ಬಿಜೆಪಿ ಆಗ್ರಹಿಸಿವೆ.
"ಎಡರಂಗದ ಸರ್ಕಾರ ಶಬರಿಮಲೆಯಲ್ಲಿನ ಸಂಪ್ರದಾಯವನ್ನು ಉದ್ದೇಶಪೂರ್ವಕವಾಗಿಯೇ ಉಲ್ಲಂಘನೆ ಮಾಡಲು ಯತ್ನಿಸುತ್ತಿದ್ದು, ಕ್ಷೇತ್ರಕ್ಕೆ ಸಾಮಾಜಿಕ ಕಾರ್ಯಕರ್ತರನ್ನು ಕಳುಹಿಸುತ್ತಿದೆ. ಭಕ್ತರು ಇದಕ್ಕೆ ತಕ್ಕ ಪಾಠ ಕಲಿಸಬೇಕಿದೆ. ಕಡಕಂಪಲ್ಲಿ ಸುರೇಂದ್ರನ್ ಅವರನ್ನು ಚುನಾವಣೆಯಲ್ಲಿ ಸೋಲಿಸಬೇಕು" ಎಂದು ಬಿಜೆಪಿ ಹೇಳಿದೆ.