ನವದೆಹಲಿ, ಮಾ.19 (DaijiworldNews/PY): ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು-ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಅವರಿಗೆ ಜಾರಿ ನಿರ್ದೇಶನಾಲಯ ಜಾರಿಗೊಳಿಸಿದ ಸಮನ್ಸ್ ತಡೆಯಾಜ್ಞೆ ನೀಡಲು ದೆಹಲಿ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿ.ಎನ್ ಪಟೇಲ್ ಮತ್ತು ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಅವರ ಪೀಠವು ಈ ಬಗ್ಗೆ ವಿಚಾರಣೆ ನಡೆಸಿದ್ದು, ಸಮನ್ಸ್ ವಿರುದ್ದ ತಡೆಯಾಜ್ಞೆ ನೀಡಲು ನಿರಾಕರಿಸಿದೆ.
ಮೆಹಬೂಬಾ ಮುಫ್ತಿಗೆ ಮಾರ್ಚ್ 22ರಂದು ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ. ಆದರೆ, ಮುಫ್ತಿ ಇದರ ವಿರುದ್ದ ತಡೆಯಾಜ್ಞೆ ಕೋರಿದ್ದರು.
ಮುಫ್ತಿ ಪರ ವಕೀಲ ನಿತ್ಯಾ ರಾಮಕೃಷ್ಣನ್ ಅವರು ಮನವಿ ಮಾಡಿದ್ದು, "ಜಾರಿ ನಿರ್ದೇಶನಾಯಲವು ಈ ಹಿಂದೆ ಮಾಡಿದಂತೆ ಈ ಬಾರಿಯೂ ಕೂಡಾ ಮುಫ್ತಿ ಅವರು ವೈಯುಕ್ತಿಕವಾಗಿ ವಿಚಾರಣೆಗೆ ಹಾಜರಾಗಬೇಕು ಎಂದು ಒತ್ತಾಯಿಸುವಂತಿಲ್ಲ" ಎಂದಿದ್ದರು.
"ಈ ಬಾರಿ ಮೆಹಬೂಬಾ ಮುಫ್ತಿ ಅವರು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಲೇಬೇಕು" ಎಂದು ಇಡಿ ಪರ ಹಾಜರಿದ್ದ ಸಾಲಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದ್ದಾರೆ.