ತಿರುವನಂತಪುರ, ಮಾ.19 (DaijiworldNews/HR): ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಅವರಿಂದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ವಿರುದ್ಧ ಬಲವಂತವಾಗಿ ಹೇಳಿಕೆ ಕೊಡಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶಾನಾಲಯದ (ಇಡಿ) ಅಧಿಕಾರಿಗಳ ವಿರುದ್ಧ ಕೇರಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, "ಸ್ವಪ್ನಾ ಸುರೇಶ್ ಅವರ ಧ್ವನಿಯ ಆಡಿಯೊ ಸೋರಿಕೆ ಬಗ್ಗೆ ತನಿಖೆ ನಡೆಸುತ್ತಿರುವ ಅಪರಾಧ ವಿಭಾಗದ ಪೊಲೀಸ್ ತಂಡ ಸಲ್ಲಿಸಿದ ವರದಿ ಆಧಾರದ ಮೇಲೆ ಎರಡು ದಿನಗಳ ಹಿಂದೆಯೇ ಪ್ರಕರಣ ದಾಖಲಿಸಿಕೊಳ್ಳಲಾಗಿದೆ" ಎಂದು ತಿಳಿಸಿದ್ದಾರೆ.
ಇನ್ನು ಅಪರಾಧ ವಿಭಾಗದ ಪೊಲೀಸರು ಇ.ಡಿ ಅಧಿಕಾರಿಗಳ ವಿರುದ್ಧ ಸೆಕ್ಷನ್ 120-ಬಿ (ಕ್ರಿಮಿನಲ್ ಪಿತೂರಿ), 167 (ಸಾರ್ವಜನಿಕ ಸೇವೆಯಲ್ಲಿರುವವರಿಗೆ ಘಾಸಿ ಉಂಟುಮಾಡಲು ಸುಳ್ಳು ದಾಖಲೆ ಸೃಷ್ಟಿಸುವುದು), 192 (ನಕಲಿ ಸಾಕ್ಷ್ಯ ಸೃಷ್ಟಿ), 195-ಎ (ಸುಳ್ಳು ಸಾಕ್ಷ್ಯನೀಡುವಂತೆ ಬೆದರಿಕೆ) ಸೇರಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.