ನವದೆಹಲಿ, ಮಾ.20 (DaijiworldNews/PY): "ಕಲಬುರ್ಗಿಯಲ್ಲಿ ರೈಲ್ವೆ ವಿಭಾಗವನ್ನು ಪ್ರಾರಂಭ ಮಾಡುವುದು ಕಾರ್ಯಸಾಧುವಲ್ಲ ಎಂಬ ತಜ್ಞರ ವರದಿಯ ಮೇರೆಗೆ ಸರ್ಕಾರ ಈ ಪ್ರಸ್ತಾವವನ್ನು ಕೈಬಿಟ್ಟಿದೆ" ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.

"ಮಲ್ಲಿಕಾರ್ಜುನ ಖರ್ಗೆ ಅವರು ರೈಲ್ವೆ ಸಚಿವರಾಗಿದ್ದ ಸಂದರ್ಭ 8 ವರ್ಷಗಳ ಹಿಂದೆಯೇ ಬಜೆಟ್ನಲ್ಲಿ ಕಲಬುರ್ಗಿ ರೈಲ್ವೆ ವಿಭಾಗ ಸ್ಥಾಪನೆಯ ಬಗ್ಗೆ ಘೋಷಣೆ ಮಾಡಿದ್ದರು. ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಬಿಜೆಪಿಯ ಐದು ಮಂದಿ ಸಂಸದರಿದ್ದರೂ ಕೂಡಾ ರೈಲ್ವೆ ವಿಭಾಗಕ್ಕೆ ಏಕೆ ಅನುಮೋದನೆ ದೊರೆತಿಲ್ಲ?" ಎಂದು ಕಾಂಗ್ರೆಸ್ನ ಜಿ.ಸಿ. ಚಂದ್ರಶೇಖರ್ ಪ್ರಶ್ನಿಸಿದ್ದರು.
ಇದಕ್ಕೆ ಉತ್ತರಿಸಿದ ಗೋಯಲ್, "ಯಾವುದೇ ರೀತಿಯಾದ ಅಧ್ಯಯನ ನಡೆಸದೇ ಕೇವಲ ಚುನಾವಣೆಯ ಉದ್ದೇಶದಿಂದ ಆ ಘೋಷಣೆ ಮಾಡಲಾಗಿತ್ತು. ಕಾರ್ಯಸಾಧುವಲ್ಲ ಎಂಬ ತಜ್ಞರ ವರದಿಯ ಮೇರೆಗೆ ಸರ್ಕಾರ ಆ ಪ್ರಸ್ತಾವವನ್ನು ಕೈಬಿಟ್ಟಿದೆ" ಎಂದಿದ್ದಾರೆ.
"ಅಗತ್ಯ ಅಧ್ಯಯನದ ನಂತರವೇ ರೈಲ್ವೆ ವಿಭಾಗದ ಘೋಷಣೆ ಮಾಡಲಾಗಿತ್ತು. ಇದು ಕಾರ್ಯಸಾಧುವಲ್ಲ ಎಂದಾದಲ್ಲಿ, ರೈಲ್ವೆ ವಿಭಾಗ ಸ್ಥಾಪನೆ ಉದ್ದೇಶಕ್ಕೆ ನೀಡಲಾದ ಭೂಮಿಯನ್ನು ಏಕೆ ಮರಳಿ ನೀಡಿಲ್ಲ?. ಆ ಭೂಮಿಗೆ ಏಕೆ ತಂತಬೇಲಿ ಹಾಕಿದ್ದು?" ಎಂದು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಳಿದ್ದಾರೆ.
"ರೈಲ್ವೆ ವಿಭಾಗ ಸ್ಥಾಪನೆ ವಿಚಾರದ ಬಗ್ಗೆ ತಾರತಮ್ಯ ನೀತಿ ಅನುಸರಿಸಲು ಸಾಧ್ಯವಿಲ್ಲ. ಈ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಪ್ರತ್ಯೇಕ ಸಭೆ ನಡೆಸಿ ನಿರ್ಧಾರ ತೆಗೆದುಕೊಳ್ಳಲಾಗುವುದು" ಎಂದಿದ್ದಾರೆ.